ಒಂಟೆಗಳು
ಪಿಟಿಐ ಚಿತ್ರ
ಬೆಂಗಳೂರು: ‘ಗೋವು, ಒಂಟೆಗಳ ಸಾಗಣೆಯನ್ನು ನಿಷೇಧಿಸಲಾಗಿದೆ. ನಗರಕ್ಕೆ ಬರುವ ವಾಹನಗಳನ್ನು ತಪಾಸಣೆ ನಡೆಸಿ ಗೋವು, ಒಂಟೆಗಳ ಸಾಗಣೆ ಕಂಡುಬಂದಲ್ಲಿ ಕಾನೂನುಕ್ರಮ ಕೈಗೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಕ್ರೀದ್ ಸಂದರ್ಭದಲ್ಲಿ ಒಂಟೆ, ಗೋವುಗಳ ಸಾಗಣೆ ಮತ್ತು ಹತ್ಯೆ ಮಾಡುವುದನ್ನು ತಡೆಗಟ್ಟುವ ಬಗ್ಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಒಂಟೆ, ಗೋವುಗಳ ಹತ್ಯೆ ಮಾಡುವುದು ಅಪರಾಧವಾಗಿದ್ದು, ಸರ್ಕಾರದ ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕು. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಪ್ರಾಣಿಗಳನ್ನು ಕಳ್ಳ ಸಾಗಣೆ ಮಾಡುವುದು ಅಪರಾಧವಾಗಿದೆ. ಗೋವು, ಒಂಟೆಗಳ ಹತ್ಯೆ ತಡೆಗಟ್ಟಲು ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕರಪತ್ರ ಹಂಚುವುದು ಹಾಗೂ ಆಟೊರಿಕ್ಷಾಗಳಲ್ಲಿ ಪ್ರಚಾರ ಮಾಡಬೇಕು’ ಎಂದು ಸೂಚಿಸಿದರು.
ಮೈಸೂರು ರಸ್ತೆ (ಕುಂಬಳಗೋಡು), ತುಮಕೂರು ರಸ್ತೆ (ಮಾದಾವರ), ಮಾಗಡಿ ರಸ್ತೆ (ತಾವರೆಕೆರೆ), ಹೊಸೂರು ರಸ್ತೆ (ಅತ್ತಿಬೆಲೆ), ಹಳೆ ಮದ್ರಾಸ್ ರಸ್ತೆಗಳಲ್ಲಿ (ಹೊಸಕೋಟೆ) ತಪಾಸಣೆ ಕೇಂದ್ರಗಳನ್ನು ಸಾರಿಗೆ ಇಲಾಖೆ ನೇತೃತ್ವದಲ್ಲಿ ಸ್ಥಾಪಿಸಿ, ಜೂನ್ 7ರವರೆಗೆ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಗೋವು, ಒಂಟೆಗಳ ಸಾಗಣೆ ಕಂಡುಬಂದಲ್ಲಿ ವಾಹನಗಳನ್ನು ವಶಪಡಿಸಿಕೊಂಡು ಪೊಲೀಸ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪಶುಪಾಲನಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಅವುಗಳನ್ನು ರಕ್ಷಣೆ ಮಾಡಿ ಸಮೀಪದಲ್ಲಿರುವ ಗೋಶಾಲೆಗಳಿಗೆ ಬಿಡಬೇಕು. ಒಂಟೆ, ಗೋಹತ್ಯೆ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಬಿಬಿಎಂಪಿಯ ಸಹಾಯವಾಣಿ 1533ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು.
ಹಬ್ಬದ ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕದಂತೆ ಎಚ್ಚರವಹಿಸಬೇಕು. ಪ್ರಾಣಿ ವಧೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಯನ್ನು ಸುಸೂತ್ರವಾಗಿ ನಿರ್ವಹಣೆ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿಯ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕ ಡಾ.ಚಂದ್ರಯ್ಯ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.