ADVERTISEMENT

ಈದ್‌ ಉಲ್‌ ಫಿತ್ರ್‌ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 20:01 IST
Last Updated 14 ಮೇ 2021, 20:01 IST
ಚಾಮರಾಜಪೇಟೆ ಈದ್ಗಾ ಮೈದಾನ ಶುಕ್ರವಾರ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ –ಪ್ರಜಾವಾಣಿ ಚಿತ್ರಗಳು
ಚಾಮರಾಜಪೇಟೆ ಈದ್ಗಾ ಮೈದಾನ ಶುಕ್ರವಾರ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಈದ್‌ ಉಲ್‌ ಫಿತ್ರ್‌ ಎಂದರೆ ಗಿಜಿಗುಡುತ್ತಿದ್ದ ಈದ್ಗಾ ಮೈದಾನಗಳು, ಮಸೀದಿಗಳು ಈ ವರ್ಷ ಬಿಕೋ ಎನ್ನುತ್ತಿದ್ದವು. ಕೋವಿಡ್ ಲಾಕ್‌ಡೌನ್ ಇರುವ ಕಾರಣ ಸಾಮೂಹಿಕ ಪ್ರಾರ್ಥನೆ ಇಲ್ಲದೆ ಸರಳವಾಗಿ ಮನೆ–ಮನೆಗಳಲ್ಲೇ ಈದ್‌ ಉಲ್‌ ಫಿತ್ರ್‌ ಆಚರಿಸಲಾಯಿತು.

ಪ್ರತಿ ಬಾರಿಯ ಈದ್‌ ಉಲ್‌ ಫಿತ್ರ್‌ ಸಂದರ್ಭದಲ್ಲಿ ಈದ್ಗಾ ಮೈದಾನಗಳು ತುಂಬಿ ತುಳುಕುತ್ತಿದ್ದವು. ಚಾಮರಾಜಪೇಟೆಯ ಈದ್ಗಾ ಮೈದಾನ, ವಿಲ್ಸನ್ ಗಾರ್ಡನ್‌ನ ರೆಡ್ ಫೋರ್ಟ್ ಮೈದಾನ, ಶಿವಾಜಿನಗರ, ಮಿನರ್ವ ವೃತ್ತ, ಮೈಸೂರು ರಸ್ತೆ ಹಾಗೂ ಮತ್ತಿತರ ಮಸೀದಿಗಳಲ್ಲಿ ಕಿಕ್ಕಿರಿದು ನೆರೆದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು.

ಕೋವಿಡ್ ಕಾರಣ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿತ್ತು. ಲಾಕ್‌ಡೌನ್ ಇರುವುದರಿಂದ ಯಾವುದೇ ಪ್ರಾರ್ಥನಾ ಮಂದಿರಗಳಿಗೆ ಜನರಿಗೆ ಪ್ರವೇಶ ಇರಲಿಲ್ಲ. ಮಸೀದಿಗಳಲ್ಲಿ ಇರುವ ಮೌಲ್ವಿಗಳು ಸೇರಿ ನಾಲ್ಕೈದು ಮಂದಿ ಮಾತ್ರ ಅಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಉಳಿದವರು ಮನೆಯಲ್ಲೇ, ಮನೆಗಳ ಮಹಡಿಗಳ ಮೇಲೆ ಕುಟುಂಬ ಸದಸ್ಯರ ಜತೆ ಸೇರಿ ಪ್ರಾರ್ಥನೆ ಸಲ್ಲಿಸಿದರು. ಹೊಸ ಬಟ್ಟೆಗಳನ್ನು ಧರಿಸಿ ಶುಭಾಶಯ ವಿನಿಯಮ ಮಾಡಿಕೊಂಡರು.

ADVERTISEMENT

ಬಿರಿಯಾನಿ, ಹಲೀಮ್‌, ಕಬಾಬ್‌, ಕೀಮಾ ಸಮೋಸ, ಶೀರ್‌ ಕುರ್ಮಾ, ಫ್ರುಟ್‌ ಸಲಾಡ್‌ ಹಾಗೂ ಇತರ ತಿನಿಸುಗಳನ್ನು ಮಾಡಿಕೊಂಡು ಮನೆಯಲ್ಲೇ ಸವಿದರು. ಸ್ನೇಹಿತರು, ಸಂಬಂಧಿಕರನ್ನು ಕರೆಯುವುದು ಕಡಿಮೆಯಾಗಿತ್ತು. ಆದರೂ, ಅತೀ ಹತ್ತಿರದವರನ್ನು ಮನೆಗೆ ಕರೆದು ಒಟ್ಟಿಗೆ ಕುಳಿತು ಊಟ ಮಾಡಿದರು. ಸಾಮಾಜಿಕ ಜಾಲತಾಣಗಳ ಮೂಲಕ ದೂರದ ಸಂಬಂಧಿಕರನ್ನು ಸಂಪರ್ಕಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

‘ಕೋವಿಡ್‌ ಲಾಕ್‌ಡೌನ್ ಇರುವುದರಿಂದ ಮಸೀದಿ, ಈದ್ಗಾಗಳಿಗೆ ತೆರಳದೆ ಮನೆಯಲ್ಲೇ ಕುಟುಂಬ ಸದಸ್ಯರು ಸೇರಿ ಹಬ್ಬ ಆಚರಿಸಿಕೊಂಡೆವು’ ಎಂದು ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ವಾಜಿದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.