ADVERTISEMENT

ಈದ್ಗಾ ಆಸ್ತಿ ವಿವಾದ: ವಕ್ಫ್ ಮಂಡಳಿಗೆ ಬಿಬಿಎಂಪಿ ನೋಟಿಸ್

ದಾಖಲೆಗಳಿದ್ದ ಮೂರು ದಿನಗಳಲ್ಲಿ ಹಾಜರುಪಡಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:15 IST
Last Updated 15 ಜೂನ್ 2022, 20:15 IST
ಈದ್ಗಾ ಮೈದಾನ
ಈದ್ಗಾ ಮೈದಾನ   

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ಆಸ್ತಿ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ವಕ್ಫ್ ಮಂಡಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ.

ಈದ್ಗಾ ಮೈದಾನದ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದು ಎಂಬುದಕ್ಕೆ ದಾಖಲೆಗಳಿದ್ದರೆ ಹಾಜರುಪಡಿಸುವಂತೆ
ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಅವರು ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

‘ಆಟದ ಮೈದಾನದ ಬಗ್ಗೆ ಗೊಂದಲಗಳು ಉಂಟಾಗಿದ್ದು, ವಕ್ಫ್ ಮಂಡಳಿ ಆಸ್ತಿ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಆಸ್ತಿ ತಮ್ಮದೆಂದು ಸಾಬೀತುಪಡಿಸಲು ದಾಖಲೆಗಳಿದ್ದರೆ ಮೂರು ದಿನಗಳಲ್ಲಿ ಸಲ್ಲಿಸಿದರೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ. ಷಾಫಿ ಸಾ– ಆದಿ, ‘ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಬಿಬಿಎಂಪಿ ಬಳಿ ಇಲ್ಲ. ಏಕೆಂದರೆ ಅದು ವಕ್ಫ್ ಮಂಡಳಿಯ ಆಸ್ತಿ. ಎಲ್ಲ ದಾಖಲೆಗಳು ನಮ್ಮ ಬಳಿ ಇವೆ’ ಎಂದರು.

‘ದಾಖಲೆಗಳನ್ನು ಕೇಳಿ ಬಿಬಿಎಂಪಿ ನೋಟಿಸ್ ನೀಡಿದೆ. ಅದಕ್ಕೆ ಯಾವ ರೀತಿಯ ಉತ್ತರ ನೀಡಬೇಕು ಎಂಬುದನ್ನು ವಕ್ಫ್ ಮಂಡಳಿ ಕಾನೂನು ವಿಭಾಗ ಪರಿಶೀಲಿಸಿದೆ. ಉತ್ತರವನ್ನೂ ಸಿದ್ಧಪಡಿಸಿದ್ದು, ಸಲ್ಲಿಸಲಾಗುವುದು’ ಎಂದರು.

ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್‌(ಸಿಎಂಎ) ಹೆಸರಿನಲ್ಲಿ 10 ಎಕರೆ ಜಾಗ ಇತ್ತು. ಖಬರಸ್ತಾನ ಮತ್ತು ಈದ್ಗಾ ಮೈದಾನ ಎರಡೂ ಇದ್ದವು. ಈಗ ಅದರಲ್ಲಿ 8 ಎಕರೆ ಕಬಳಿಕೆಯಾಗಿದ್ದು, ಎರಡು ಎಕರೆ ಮಾತ್ರ ಉಳಿದು
ಕೊಂಡಿದೆ. ಖಬರಸ್ತಾನದ ಜಾಗಕಬಳಕೆ ಆಗಿದ್ದರಿಂದ ಮೈಸೂರು ರಸ್ತೆಯಲ್ಲಿ ಬದಲಿ ಜಾಗವನ್ನೂ ನೀಡಲಾಗಿದೆ ಎಂದರು. ‘ಈ ಎಲ್ಲ ವಿವಾದಗಳನ್ನೂ ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸಿದೆ. ಅದಕ್ಕೆ ಸಂಬಂಧಿಸಿದ ಆದೇಶ ಪತ್ರಗಳು ನಮ್ಮ ಬಳಿ ಇವೆ. ಸುಪ್ರೀಂ ಕೋರ್ಟ್‌ಗಿಂತ ದೊಡ್ಡವರು ಯಾರೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.