ADVERTISEMENT

ಎಂಟು ದ್ವಿಚಕ್ರ ವಾಹನ ವಶ: ಆರೋಪಿ ಬಂಧನ

ವಾಹನಗಳ ಬಿಡಿ ಭಾಗಗಳ ಕಳವು ಮಾಡಿ ಮಾರಾಟ ಮಾಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 16:14 IST
Last Updated 17 ಮಾರ್ಚ್ 2025, 16:14 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ತಮಿಳುನಾಡಿನ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ, ₹9 ಲಕ್ಷ ಮೌಲ್ಯದ ಎಂಟು ವಾಹನ ವಶಪಡಿಸಿಕೊಂಡಿದ್ದಾರೆ.

ADVERTISEMENT

ತಮಿಳುನಾಡಿನ ಕಂಬಿಕೊಲೈ ಗ್ರಾಮದ ಕುಟ್ಟಿವೇಡಿ ಮುರುಗೇಶ್ (21) ಬಂಧಿತ ಆರೋಪಿ.

ವಿಕ್ಟರ್ ಎಂಬುವರು ಕಮ್ಮನಹಳ್ಳಿಯ ಚಾಯ್ ಡೇ ಮುಂಭಾಗ ಬೆಳಿಗ್ಗೆ ಸ್ಕೂಟಿ ನಿಲ್ಲಿಸಿ, ಸಂಜೆ ವಾಪಸ್ ಬಂದು ನೋಡಿದಾಗ ವಾಹನ ಇರಲಿಲ್ಲ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದರು.

ಪ‍್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಿ, ಆರೋಪಿಯ ಚಹರೆ ಪತ್ತೆ ಮಾಡಿ ಬಂಧಿಸಿದ್ದಾರೆ.

‘ಆರೋಪಿಯು ತಮಿಳುನಾಡಿನ ನಿವಾಸಿಯಾಗಿದ್ದು, ನಗರದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಆರು ತಿಂಗಳಿನಿಂದ ವಾಸವಿದ್ದಾನೆ. ಕೆ.ಜಿ.ಹಳ್ಳಿ ಹಳೇ ಬಾಗಲೂರು ಬಡಾವಣೆಯಲ್ಲಿ ಗಾರೆ ಕೆಲಸ ಮಾಡುತ್ತಿದ್ದು, ದುಶ್ಚಟಗಳಿಗೆ ದಾಸನಾಗಿದ್ದ. ಮದ್ಯ ಹಾಗೂ ಸಿಗರೇಟ್‌ಗೆ ಹಣ ಹೊಂದಿಸುವ ಸಲುವಾಗಿ ರಸ್ತೆ ಬದಿ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರ್‌.ಟಿ. ನಗರ, ಬಾಣಸವಾಡಿ, ಗೋವಿಂದಪುರ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ಕೆಲವು ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ಬಿಚ್ಚಿ ಶಿವಾಜಿ ನಗರದಲ್ಲಿರುವ ಗುಜರಿಗೆ ಮಾರಾಟ ಮಾಡಿದ್ದ. ಆರೋಪಿ ನೀಡಿದ ಮಾಹಿತಿ ಆಧರಿಸಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಎಂಟು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.