ADVERTISEMENT

ವೃದ್ಧಾಶ್ರಮಕ್ಕೆ ಕಳಿಸಿದ ಮಗ: ನೊಂದ ವೃದ್ಧ ದಂಪತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:24 IST
Last Updated 25 ಜೂನ್ 2025, 16:24 IST
<div class="paragraphs"><p>ಕೃಷ್ಣಮೂರ್ತಿ, ರಾಧಾ</p></div>

ಕೃಷ್ಣಮೂರ್ತಿ, ರಾಧಾ

   

ಬೆಂಗಳೂರು: ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ಜೆ.ಪಿ. ನಗರದ ಎಂಟನೇ ಹಂತದ ವೃದ್ಧಾಶ್ರಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣಮೂರ್ತಿ (81) ಹಾಗೂ ಅವರ ಪತ್ನಿ ರಾಧಾ (74) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ADVERTISEMENT

ಒಂದು ತಿಂಗಳ ಹಿಂದೆ ತಂದೆ ಹಾಗೂ ತಾಯಿಯನ್ನು ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದ. ಅದರಿಂದ ನೊಂದು ಆತ್ಮಹತ್ಯೆ ಮಾಡಿಕೊಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮನೆಯಲ್ಲಿ ಸೊಸೆ ಅಡುಗೆಯನ್ನು ಚೆನ್ನಾಗಿ ಮಾಡುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ತಂದೆ, ತಾಯಿಯನ್ನು ಪುತ್ರ ವೃದ್ಧಾಶ್ರಮಕ್ಕೆ ಸೇರಿಸಿದ್ದ’ ಎಂದು ಮೂಲಗಳು ಹೇಳಿವೆ.

ವೃದ್ಧಾಶ್ರಮದಲ್ಲಿ ದಂಪತಿಗೆ ಕೋಣೆ ನೀಡಲಾಗಿತ್ತು. ಅದೇ ಕೋಣೆಯಲ್ಲಿ ವೃದ್ಧ ದಂಪತಿ ವಾಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಕೊಠಡಿಯ ಬಾಗಿಲು ತೆರೆದಿರಲಿಲ್ಲ. ಆಶ್ರಮದ ಸಿಬ್ಬಂದಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

‘ಸೊಸೆಯ ಜೊತೆಗೆ ಹೊಂದಾಣಿಕೆ ಇರದ ಕಾರಣ ಬೇರೆ ಮನೆ ಮಾಡಿಕೊಡಲು ಪುತ್ರನ ಬಳಿ ಪೋಷಕರು ಕೇಳಿಕೊಂಡಿದ್ದರು. 2021ರಲ್ಲಿ ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ತಂದೆ–ತಾಯಿಯನ್ನು ಪುತ್ರ ಸೇರಿಸಿದ್ದ. ಬಳಿಕ, 2023ರಲ್ಲಿ ತಂದೆ, ತಾಯಿಯನ್ನು ಮನೆಗೆ ಪಾಪಸ್‌ ಕರೆತಂದಿದ್ದ. ಮತ್ತೆ ಮನೆಯಲ್ಲಿ ಗಲಾಟೆ ಆರಂಭವಾಗಿತ್ತು. ಹೀಗಾಗಿ, ಕಳೆದ ತಿಂಗಳು ಬನಶಂಕರಿ ವೃದ್ಧಾಶ್ರಮಕ್ಕೆ  ಸೇರಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಊಟ ಮಾಡಿದ ಬಳಿಕ ದಂಪತಿ ಟಿ.ವಿ ವೀಕ್ಷಿಸುತ್ತಿದ್ದರು. ಟಿ.ವಿ ನೋಡುವ ವಿಚಾರಕ್ಕೆ ಗಲಾಟೆ ಆಗಿತ್ತು. ನಂತರ, ಕೊಠಡಿಗೆ ತೆರಳಿದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟಿ.ವಿ ವೀಕ್ಷಣೆಗಾಗಿ ಯಾರ‍್ಯಾರ ಮಧ್ಯೆ ಗಲಾಟೆ ಆಗಿತ್ತು ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಆತ್ಮಹತ್ಯೆ ವಿಷಯವನ್ನು ಪುತ್ರನಿಗೆ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದರು.

ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ​ ದಾಖಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.