ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಎನ್. ಸಂತೋಷ್ ಹೆಗ್ಡೆ ಅವರೊಂದಿಗೆ ಎ.ಟಿ. ರಾಮಸ್ವಾಮಿ ಚರ್ಚೆಯಲ್ಲಿ ತೊಡಗಿದ್ದರು. ಬಿ.ಎಚ್. ಸುರೇಶ್ ಹಾಗೂ ಕೆ.ಎಚ್. ರಾಮಲಿಂಗಾರೆಡ್ಡಿ ಹಾಜರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಯುವಜನರು ದಾರಿ ತಪ್ಪುವುದಲ್ಲ. ಹೆತ್ತವರು, ಶಿಕ್ಷಕರು ಸೇರಿದಂತೆ ನಾವು ಸರಿದಾರಿ ತೋರದೇ ದಾರಿ ತಪ್ಪುವಂತೆ ಮಾಡುತ್ತಿದ್ದೇವೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದರು.
ಸರ್ಕಾರಿ ಜಮೀನುಗಳನ್ನು ಭೂಮಾಫಿಯಾದಿಂದ ಸಂರಕ್ಷಿಸಲು, ಸರ್ಕಾರ, ಸರ್ಕಾರಿ ಅಧಿಕಾರಿಗಳು, ನ್ಯಾಯಾಲಯಗಳು ಮತ್ತು ಸಾರ್ವಜನಿಕರ ಪಾತ್ರ ಕುರಿತು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ ಮಕ್ಕಳು ತಪ್ಪು ಮಾಡಿದರೆ ಹೆತ್ತವರು ಬುದ್ಧಿ ಹೇಳಿ ಸರಿಪಡಿಸುತ್ತಿದ್ದರು. ಅಗತ್ಯ ಬಿದ್ದರೆ ಶಿಕ್ಷೆಯನ್ನೂ ಕೊಡುತ್ತಿದ್ದರು. ಶಾಲೆಗಳಲ್ಲಿಯೂ ಇದೇ ಪದ್ಧತಿ ಇರುತ್ತಿತ್ತು. ಜೊತೆಗೆ ನೀತಿ ಪಾಠಗಳೂ ಇರುತ್ತಿದ್ದವು. ಸರಿ ಯಾವುದು, ತಪ್ಪು ಯಾವುದು ಎಂಬುದು ಮಕ್ಕಳಿಗೆ ಗೊತ್ತಾಗುತ್ತಿತ್ತು. ಈಗ ಹೆತ್ತವರಿಗೆ ಸಮಯ ಇಲ್ಲ. ಮಕ್ಕಳ ಕೈಗೆ ಮೊಬೈಲ್ ನೀಡಿ ತಮ್ಮ ಕೆಲಸದಲ್ಲಿ ಮುಳುಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಶಾಲಾ ಕಾಲೇಜುಗಳಲ್ಲಿ ನಮ್ಮ ಕಾಲಕ್ಕಿಂತ ಹತ್ತು ಪಟ್ಟು ಉತ್ತಮ ವಿದ್ಯೆ ನೀಡಲಾಗುತ್ತಿದೆ. ವ್ಯಕ್ತಿತ್ವ ನಿರ್ಮಾಣ ಆಗುತ್ತಿಲ್ಲ. ಆಟಂ ಬಾಂಬ್ ತಯಾರಿಸುವುದು ಹೇಗೆ ಎಂಬುದನ್ನೂ ಹೇಳಿಕೊಡಲಾಗುತ್ತಿದೆ. ಆದರೆ, ಅದರ ಬಳಕೆ ಹೇಗೆ ಎಂಬುದನ್ನು ಕಲಿಸುತ್ತಿಲ್ಲ’ ಎಂದರು.
ಜನರಿಗೆ ತೃಪ್ತಿ ಇಲ್ಲದಿರುವುದೇ ಭ್ರಷ್ಟಾಚಾರಕ್ಕೆ ಕಾರಣ. ಇದ್ದಿದ್ದರಲ್ಲಿ ಸಂತೋಷ ಪಡುವುದನ್ನು ಕಲಿಯಬೇಕು. ಕನಸು, ಆಕಾಂಕ್ಷೆಗಳು ಇರುವುದು ತಪ್ಪಲ್ಲ. ಯಾರ ಜೇಬಿಗೂ ಕೈ ಹಾಕದೇ ಸರಿದಾರಿಯಲ್ಲಿ ಸಾಗುವುದು ಮುಖ್ಯ ಎಂದು ಸಲಹೆ ನೀಡಿದರು.
ರಾಜ್ಯದ ವಿವಿಧೆಡೆ ಭೂ ಕಬಳಿಕೆಯ ವಿರುದ್ಧ ಹೋರಾಟ ಮಾಡಿರುವ ಸ್ನೇಹಮಯಿ ಕೃಷ್ಣ, ಬಿ.ಎಚ್. ಸುರೇಶ್, ಎ.ಆರ್. ಶಶಿಕುಮಾರ್, ಸೋಮನಾಥ ನಾಯಕ್, ರಂಜನ್ ರಾವ್, ನಳಿನಗೌಡ, ದೊರೆಸ್ವಾಮಿ, ದಯಾನಂದ, ಶ್ರೀನಿವಾಸ್, ರಾಜಾನುಕುಂಟೆ ಲೋಕೇಶ್ ಗೌಡ, ಮಂಗಳೂರಿನ ಲೋಕೇಶ್ ಗೌಡ, ಟಿ.ಎಸ್. ಮುರಳೀಧರ, ವೆಂಕಟೇಶ್ ಭೋವಿ, ಪುರುಷೋತ್ತಮ, ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ, ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಧ್ಯಕ್ಷ ಕೆ.ಎಚ್. ರಾಮಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.