ADVERTISEMENT

‘ಅಧಿಕಾರ ಕಿತ್ತುಕೊಂಡ ಸರ್ಕಾರ’–ಚುನಾವಣೆ ಆಯೋಗ

ಹೈ ಕೋರ್ಟ್‌ಗೆ ಚುನಾವಣೆ ಆಯೋಗ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 21:05 IST
Last Updated 17 ಮೇ 2022, 21:05 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು:‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ, ನಮ್ಮ ಅಧಿಕಾರವನ್ನು ಹಿಂಪಡೆದಿರುವ ಕಾರಣ ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವ ಅಗತ್ಯವಿದೆ’ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಮನವಿ ಮಾಡಿದೆ.

ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿ ಸಿದಂತೆ ಚುನಾವಣಾ ಆಯೋಗ ಸಲ್ಲಿಸಿರುವ ತುರ್ತು ಅರ್ಜಿಯ ಮೇಲಿನ ಜ್ಞಾಪನಾ ಪತ್ರವನ್ನು (ಮೆಮೊ) ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಹಾಗೂ ಎಂ.ಜಿ.ಉಮಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಪರಿಶೀಲಿಸಿತು.

ವಿಚಾರಣೆ ವೇಳೆ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸಲ್ಲಿಸಿರುವ ಮೆಮೊ ಬಗ್ಗೆ ನ್ಯಾಯಪೀಠಕ್ಕೆ ವಿವರಿಸಿದರು. ‘ರಾಜ್ಯ ಸರ್ಕಾರ 2021ರ ಉತ್ತರಾರ್ಧದಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಆಯೋಗದ ಅಧಿಕಾರವನ್ನು ಕಿತ್ತುಕೊಂಡಿದೆ’ ಎಂದು ದೂರಿದರು.

ADVERTISEMENT

ಮೆಮೊ ಪರಿಶೀಲಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸುಪ್ರೀಂ ಕೋರ್ಟ್ ಸೂಚಿಸಿದ ಮೇಲೆ ಮತ್ತೇಕೆ ಮೆಮೊ’ ಎಂದು ಪ್ರಶ್ನಿಸಿತಲ್ಲದೆ, ‘ಹಾಗಿದ್ದರೆ ಈ ಅರ್ಜಿಯ ಸಂಪೂರ್ಣ ವಿಚಾರಣೆ ನಡೆಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿತು.

ಕಳೆದ ವರ್ಷ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಅವಧಿ ಪೂರ್ಣಗೊಂಡ ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿದ್ದ ಚುನಾವಣಾ ಆಯೋಗವು ಈ ಸಂಬಂಧ ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿತ್ತು. ಅಂತೆಯೇ ಮೀಸಲಾತಿ ಕರಡು ಸಹ ಪ್ರಕಟಿಸಲಾಗಿತ್ತು.

ದಿನಾಂಕ ಘೋಷಣೆ ಮಾಡಬೇಕು ಎನ್ನುವ ಸಂದರ್ಭದಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ, ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದ ಸರ್ಕಾರ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣಾ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.