
ಬೆಂಗಳೂರು: ‘ಕೇಂದ್ರ ಸರ್ಕಾರದ ಸೂಚನೆಯಂತೆ ಜಿಸಿಸಿ (ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್) ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಗೆ ಪಡೆದಿರುವ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ಕೊರತೆಯಿಂದ ನಿಗಮದ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಜಿಸಿಸಿ ಅಡಿಯಲ್ಲಿ ಬಸ್ ಪೂರೈಕೆ ಮತ್ತು ನಿರ್ವಹಣೆಗೆ ಕೇಂದ್ರ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಫೇಮ್ ಯೋಜನೆ ಅಡಿಯಲ್ಲಿ ನಗರ ಸಾರಿಗೆಗಳಿಗಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಜಿಸಿಸಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಪಡೆಯಲಾಗುತ್ತಿದೆ. ಈ ಮಾದರಿಯಡಿ ಬಸ್ ನಿರ್ವಹಣೆ, ಚಾಲಕರ ನೇಮಕ ಎಲ್ಲವೂ ಖಾಸಗಿ ಸಂಸ್ಥೆಗಳೇ ನಿರ್ವಹಿಸುತ್ತವೆ. ನಿಗಮದಿಂದ ಕೇವಲ ನಿರ್ವಾಹಕರು ಮಾತ್ರ ಇರುತ್ತಾರೆ’ ಎಂದರು.
‘ಬಿಎಂಟಿಸಿಯಲ್ಲಿ ಸದ್ಯ 1,644 ಎಲೆಕ್ಟ್ರಿಕ್ ಬಸ್‌ಗಳಿವೆ. ಈ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ. ಅಲ್ಲದೆ, ಅದರ ಚಾಲಕರು ಬಸ್ ಪೂರೈಸಿದ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಬಿಎಂಟಿಸಿ ಸಮರ್ಪಕ ಸೇವೆ ನೀಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ, ಎಲೆಕ್ಟ್ರಿಕ್ ಬಸ್ ನಿರ್ವಹಣೆ ಕುರಿತಂತೆ ಖಾಸಗಿ ಸಂಸ್ಥೆಗಳಿಗೆ ಕಠಿಣ ಸೂಚನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು.
‘ಬಿಎಂಟಿಸಿಗೆ ಎನ್‌ಟಿಪಿಸಿ ಸಂಸ್ಥೆಯಿಂದ 90, ಸ್ವಿಚ್ ಮೊಬಿಲಿಟಿಯಿಂದ 300, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಷನ್ಸ್‌ನಿಂದ 1,031 ಹಾಗೂ ಒಎಚ್‌ಎಂ ಗ್ಲೋಬಲ್ ಮೊಬಿಲಿಟಿ ಕಂಪನಿಯಿಂದ 251 ಬಸ್‌ಗಳು ಪೂರೈಕೆ ಆಗಿವೆ. ಈ ನಾಲ್ಕೂ ಸಂಸ್ಥೆಗಳಿಂದ ಪೂರೈಕೆಯಾದ ಬಸ್‌ಗಳಿಂದ ಈವರೆಗೆ 2,049 ಬಾರಿ ಬ್ರೇಕ್‌ಡೌನ್ ಆಗಿವೆ. ಬ್ಯಾಟರಿ ಕಾರಣದಿಂದ 14,082 ಬಾರಿ ಅಪಘಾತಗಳು ಸಂಭವಿಸಿವೆ. ವಿವಿಧ ಕಾರಣಕ್ಕೆ ₹25.51 ಕೋಟಿ ದಂಡ ವಿಧಿಸಲಾಗಿದೆ. ಬಸ್‌ಗಳು ಪದೇ ಪದೇ ಬ್ರೇಕ್‌ಡೌನ್ ಆಗುವ ಕಾರಣದಿಂದಾಗಿ ಬಸ್‌ಗಳ ಸೇವೆ ಸ್ಥಗಿತಗೊಳಿಸಬೇಕಾಗುತ್ತದೆ’ ಎಂದರು.
₹ 92.90 ಲಕ್ಷ ಆದಾಯ ನಷ್ಟ: ‘ಬಸ್ ಪೂರೈಸಿರುವ ಸಂಸ್ಥೆಗಳು ಹಾಗೂ ಅವರು ನೇಮಿಸಿರುವ ಖಾಸಗಿ ಚಾಲಕರ ನಡುವಿನ ಸಂಘರ್ಷದಿಂದ ಈವರೆಗೆ 21 ಬಾರಿ ಎಲೆಕ್ಟ್ರಿಕ್ ಬಸ್‌ಗಳ ಸೇವೆ ಸ್ಥಗಿತಗೊಂಡಿದೆ. ಪರಿಣಾಮ, ಒಟ್ಟು 1.58 ಲಕ್ಷ ಕಿ.ಮೀ ಬಸ್ ಕಾರ್ಯಾಚರಣೆ ರದ್ದಾಗಿದೆ. ಇದರಿಂದ ₹92.90 ಲಕ್ಷ ಆದಾಯ ಇಲಾಖೆಗೆ ನಷ್ಟವಾಗಿದೆ. ಚಾಲಕರು ವೇತನ ಮತ್ತು ಬೋನಸ್ ಕಾರಣಕ್ಕಾಗಿ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರಿಂದ ಸೇವೆ ರದ್ದಾಗುವಂತಾಗಿದೆ’ ಎಂದೂ ರಾಮಲಿಂಗಾರೆಡ್ಡಿ ಹೇಳಿದರು.
ಹೆಚ್ಚುವರಿ ದಂಡ– ಎಚ್ಚರಿಕೆ: ‘ಈ ಸಮಸ್ಯೆಗಳ ಕುರಿತು ಖಾಸಗಿ ಸಂಸ್ಥೆಗಳ ಜೊತೆ ಸುಮಾರು 10 ಬಾರಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸಭೆ ವೇಳೆ ಇ.ವಿ ಬಸ್ ಬ್ಯಾಟರಿ ಅಪ್ ಗ್ರೇಡ್ ಮಾಡಿದ್ದೇವೆಂದು ಭರವಸೆ ನೀಡಿದ್ದಾರೆ. ಒಂದು ವಾರದಲ್ಲಿ ಅಪ್ ಗ್ರೇಡ್ ಬ್ಯಾಟರಿಯ ಕಾರ್ಯಕ್ಷಮತೆ ಬಗ್ಗೆ ನಿಗಾ ಮಾಡುತ್ತಿದ್ದೇವೆ. ಈ ಸಮಸ್ಯೆಗಳಿಂದ ಸಾರಿಗೆ ಆದಾಯ ನಷ್ಟ ಆಗುತ್ತಿದೆ. ಇದನ್ನು ವಸೂಲಿ ಮಾಡುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ. ಈಗಾಗಲೇ ದಂಡದ ರೂಪದಲ್ಲಿ ₹12 ಕೋಟಿ ಕಡಿತ ಮಾಡಿದ್ದೇವೆ. ಮುಂದೇ ಇದೇ ರೀತಿ ಮುಂದುವರಿದರೆ ಹೆಚ್ಚುವರಿ ಕಡಿತ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇವೆ’ ಎಂದರು.
‘ಜಿಸಿಸಿ ಮಾದರಿಯಲ್ಲಿ ಪೂರೈಕೆಯಾದ ಎಲೆಕ್ಟ್ರಿಕ್ ಬಸ್‌ಗಳಿಂದ ಆಗಿರುವ ಸಮಸ್ಯೆಗಳ ಕುರಿತಂತೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲಾಗಿದೆ. ಕುಮಾರಸ್ವಾಮಿ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
‘ಎಲೆಕ್ಟ್ರಿಕ್ ಬಸ್‌ಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಅಂಕಿಅಂಶಗಳ ಸಹಿತ ಆ ಪತ್ರದಲ್ಲಿ ವಿವರಿಸಲಾಗಿದೆ. ಬಿಎಂಟಿಸಿ ಹೆಸರು ಹಾಳಾಗುತ್ತಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಜಿಸಿಸಿ ಮಾದರಿಯಲ್ಲಿ ಬಸ್ ಪೂರೈಸುವ ಸಂಸ್ಥೆಗಳ ಕಾರ್ಯಕ್ಷಮತೆ ಪರಿಶೀಲಿಸಿ ನಂತರ ಬಸ್ ಪೂರೈಕೆ ಆದೇಶ ನೀಡಬೇಕು. ವಿಶೇಷವಾಗಿ ಬಸ್‌ಗಳು ಬ್ರೇಕ್‌ಡೌನ್ ಆಗುವ ಪ್ರಮಾಣವನ್ನು ಪರಾಮರ್ಶಿಸುವಂತೆ ಕೋರಲಾಗಿದೆ’ ಎಂದರು.
‘ಅಲ್ಲದೆ, ಸಂಸ್ಥೆಗಳು ನೇಮಿಸುವ ಚಾಲಕರಿಗೆ ಸಮಗ್ರ ಮತ್ತು ಪ್ರಮಾಣಿತ ತರಬೇತಿ ಕಾರ್ಯಕ್ರಮ ಕೈಗೊಳ್ಳುವುದು ಕಡ್ಡಾಯಗೊಳಿಸಬೇಕು. ಸುರಕ್ಷತೆ ಮತ್ತು ಸೇವಾ ಗುಣಮಟ್ಟದ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ ಜಂಟಿಯಾಗಿ ಯೋಜನೆ ರೂಪಿಸಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.