ಬೆಂಗಳೂರು: ವಿದ್ಯುತ್ ಸಂಪರ್ಕ ಪಡೆಯಲು ಕಟ್ಟಡಗಳ ಸ್ವಾಧೀನಾನುಭವ ಪತ್ರ (ಒ.ಸಿ) ಕಡ್ಡಾಯಗೊಳಿಸಿರುವುದರಿಂದ ಆಗುತ್ತಿರುವ ಸಮಸ್ಯೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಕೆಪಿಸಿಸಿ ಕಚೇರಿಗೆ ಗುರುವಾರ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ವಿದ್ಯುತ್ ಸಂಪರ್ಕಕ್ಕೆ ಒ.ಸಿ ಕಡ್ಡಾಯ ಮಾಡಿರುವ ಕಾರಣ ಮನೆ ನಿರ್ಮಾಣ, ಕೈಗಾರಿಕೋದ್ಯಮಕ್ಕೆ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ಪರಿಹಾರ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದರು.
ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರ ವಿದ್ಯುತ್ ಸಂಪರ್ಕಗಳಿಗೆ ಒ.ಸಿ ಕಡ್ಡಾಯಗೊಳಿಸಿದೆ. ಇದರಿಂದ ಉದ್ಭವವಾಗಿರುವ ಸಮಸ್ಯೆ ನಿವಾರಿಸಲು ಬೈಲಾ ತಿದ್ದುಪಡಿ ಮಾಡಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.
ಗೃಹ ಜ್ಯೋತಿ ಡಿ ಲಿಂಕ್ ಸಮಸ್ಯೆ ಇಲ್ಲ: ಗೃಹ ಜ್ಯೋತಿ ಯೋಜನೆಯಿಂದ ಜನರಿಗೆ ತುಂಬಾ ಅನುಕೂಲವಾಗಿದೆ. ಆದರೆ ಬಾಡಿಗೆ ಮನೆ ಬದಲಿಸುವಾಗ ಹಳೆಯ ಆರ್.ಆರ್. ಸಂಖ್ಯೆ ಡಿ ಲಿಂಕ್ ಮಾಡಿ ಹೊಸ ಆರ್. ಆರ್ ಸಂಖ್ಯೆಗೆ ಲಿಂಕ್ ಮಾಡುವ ವೇಳೆ ಸಮಸ್ಯೆಯಾಗುತ್ತಿದೆ ಎಂಬ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಆನ್‌ಲೈನ್ ಮೂಲಕವೇ ಡಿ–ಲಿಂಕ್ ಮತ್ತು ಲಿಂಕ್ ವ್ಯವಸ್ಥೆ ಮಾಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಂದೊಮ್ಮೆ ನಿರ್ದಿಷ್ಟ ವ್ಯಕ್ತಿಗಳಿಗೆ ಸಮಸ್ಯೆ ಕಾಣಿಸಿಕೊಂಡರೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು’ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಪ್ರಸ್ತುತ 1.60 ಕೋಟಿ ಕುಟುಂಬಗಳು ಶೂನ್ಯ ಬಿಲ್ ಅನುಕೂಲ ಪಡೆದುಕೊಳ್ಳುತ್ತಿವೆ. ಇದರ ಸಹಾಯಧನದ ಮೊತ್ತ ಸುಮಾರು₹ 9,000 ಕೋಟಿಯನ್ನು ಈಗಾಗಲೇ ಸರ್ಕಾರ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಬೇಸಿಗೆಯಲ್ಲಿ ಅನ್ಯ ರಾಜ್ಯಗಳಿಂದ ವಿನಿಮಯದ ಆಧಾರದ ಮೇಲೆ ವಿದ್ಯುತ್ ಪಡೆದು ಗ್ರಾಹಕರಿಗೆ ಪೂರೈಸಿದ್ದು, ವಿದ್ಯುತ್ ಕೊರತೆ ಆಗದಂತೆ ಗಮನಹರಿಸಲಾಗಿದೆ. ಪ್ರಸ್ತುತ ರಾಜ್ಯದ ಒಟ್ಟು ಉತ್ಪಾದನೆಯ ಪೈಕಿ ಶೇಕಡ 65ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತಿದೆ. ಇದರಿಂದಾಗಿ ಈಗ ಹೆಚ್ಚುವರಿ ವಿದ್ಯುತ್ ರಾಜ್ಯದಲ್ಲಿ ಲಭ್ಯವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.