ADVERTISEMENT

ಎಲೆಕ್ಟ್ರಾನಿಕ್ ಅಪಘಾತ: ಅತಿವೇಗದಲ್ಲಿದ್ದ ಕಾರು ನಿಯಂತ್ರಿಸಲಾಗಲಿಲ್ಲ ಎಂದ ಆರೋಪಿ

ಇಬ್ಬರ ಸಾವು ಪ್ರಕರಣ; ಆರೋಪಿ ಹೇಳಿಕೆ ಪಡೆದು, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 18:50 IST
Last Updated 30 ಸೆಪ್ಟೆಂಬರ್ 2021, 18:50 IST
   

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದ ಪ್ರರಕಣದ ಆರೋಪಿ ಪಿ. ನಿತೀಶ್‌ನನ್ನು (23) ಬಂಧಿಸಿದ್ದ ಸಂಚಾರ ಪೊಲೀಸರು, ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

‘ಸೆ. 14ರಂದು ರಾತ್ರಿ ಸಂಭವಿಸಿದ್ದ ಅಪಘಾತದಲ್ಲಿ ಪ್ರೀತಂಕುಮಾರ್‌ (30) ಹಾಗೂ ಕೃತಿಕಾರಾಮನ್‌ (28) ಎಂಬುವರು ಮೃತಪಟ್ಟಿದ್ದರು. ಅಪಘಾತಕ್ಕೆ ಕಾರಣವಾದ ಕಾರು ಚಾಲಕ ನಿತೀಶ್‌ಗೂ ತೀವ್ರ ಗಾಯವಾಗಿತ್ತು. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಯ ಬೆನ್ನುಮೂಳೆಗೆ ಪೆಟ್ಟಾಗಿದ್ದು, ಆತ ನಡೆಯುವ ಸ್ಥಿತಿಯಲ್ಲಿಲ್ಲ. ಜಾಮೀನು ಸಹಿತ ಪ್ರಕರಣವಾಗಿದ್ದರಿಂದ ಆತನನ್ನು ಬಂಧಿಸಿ, ಹಿರಿಯ ಅಧಿಕಾರಿಗಳ ಸಲಹೆಯಂತೆ ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಸದ್ಯ ಆತ ಆಸ್ಪತ್ರೆಯಲ್ಲೇ ಇದ್ದಾನೆ’ ಎಂದೂ ತಿಳಿಸಿವೆ.

ADVERTISEMENT

ಕ್ರಿಕೆಟ್ ಮುಗಿಸಿ ಹೊರಟಿದ್ದಾಗ ಘಟನೆ: ‘ಬೊಮ್ಮಸಂದ್ರದ ತಿರುಪಾಳ್ಯ ಗ್ರಾಮದ ನಿತೀಶ್, ಕ್ರಿಕೆಟ್ ಆಡಲು ನಗರಕ್ಕೆ ಬಂದಿದ್ದ. ಆಟ ಮುಗಿಸಿ ರಾತ್ರಿ ವಾಪಸು ಹೋಗುವಾಗ ಈ ಅಪಘಾತ ನಡೆದಿತ್ತು. ಈ ಬಗ್ಗೆ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕ್ರಿಕೆಟ್ ಆಟವಾಡಿ ಸುಸ್ತಾಗಿತ್ತು. ಬೇಗ ಮನೆಗೆ ಹೋಗಿ ವಿಶ್ರಾಂತಿ ಪಡೆಯಲೆಂದು ಮೇಲ್ಸೇತುವೆಯಲ್ಲಿ ಕಾರನ್ನು ಅತಿವೇಗವಾಗಿ ಚಲಾಯಿಸಿದ್ದೆ. ಮಾರ್ಗಮಧ್ಯೆ ಕಾರು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪಕ್ಕದಲ್ಲಿದ್ದ ವಾಹನ ನಿಲುಗಡೆ ಸ್ಥಳಕ್ಕೆ ಕಾರು ನುಗ್ಗಿ ಅಪಘಾತ ಸಂಭವಿಸಿತು’ ಎಂಬುದಾಗಿ ಆತ ತಿಳಿಸಿದ್ದಾನೆ’ ಎಂದೂ ಮೂಲಗಳು ವಿವರಿಸಿವೆ.

ಸದ್ಯದಲ್ಲೇ ಆರೋಪ ಪಟ್ಟಿ: ‘ಮೃತ ಪ್ರೀತಂಕುಮಾರ್ ಹಾಗೂ ಕೃತಿಕಾ, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಬ್ಬರ ಮರಣೋತ್ತರ ಪರೀಕ್ಷೆ ವರದಿ ಸಂಗ್ರಹಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಸದ್ಯದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.