ADVERTISEMENT

ಎಲಿವೇಟೆಟ್‌ ಕಾರಿಡಾರ್‌ಗೆ ಯುಎಚ್‌ಪಿಎಫ್‌ಆರ್‌ಸಿ

ಬಿ–ಸ್ಮೈಲ್‌: 13 ಮೇಲ್ಸೇತುವೆ/ಕಾರಿಡಾರ್‌ಗೆ ಹೊಸ ತಂತ್ರಜ್ಞಾನ ಬಳಸಲು ತಜ್ಞರ ಸಮ್ಮತಿ

ಆರ್. ಮಂಜುನಾಥ್
Published 10 ಡಿಸೆಂಬರ್ 2025, 22:58 IST
Last Updated 10 ಡಿಸೆಂಬರ್ 2025, 22:58 IST
ಮಹಾರಾಷ್ಟ್ರದ ಲಾತೂರ್‌ನಲ್ಲಿ ಯುಎಚ್‌ಪಿಎಫ್‌ಆರ್‌ಸಿನಿಂದ ನಿರ್ಮಿಸಿರುವ ಮೇಲ್ಸೇತುವೆ 
ಮಹಾರಾಷ್ಟ್ರದ ಲಾತೂರ್‌ನಲ್ಲಿ ಯುಎಚ್‌ಪಿಎಫ್‌ಆರ್‌ಸಿನಿಂದ ನಿರ್ಮಿಸಿರುವ ಮೇಲ್ಸೇತುವೆ    

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 13 ಎಲಿವೇಟೆಡ್‌ ಕಾರಿಡಾರ್‌/ ಮೇಲ್ಸೇತುವೆ ನಿರ್ಮಾಣದಲ್ಲಿ ದೀರ್ಘಬಾಳಿಕೆ ಹಾಗೂ ವೇಗವಾದ ಕಾಮಗಾರಿಗೆ ಅನುವಾಗುವ ‘ಅಲ್ಟ್ರಾ ಹೈ ಪರ್ಫಾಮೆನ್ಸ್‌ ಫೈಬರ್‌ ರಿ-ಇನ್‌ಫೋರ್ಸ್ಡ್‌ ಕಾಂಕ್ರೀಟ್‌’ (ಯುಎಚ್‌ಪಿಎಫ್‌ಆರ್‌ಸಿ) ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಹಲವು ವರ್ಷಗಳಿಂದ ನಡೆಯುತ್ತಿರುವ ಈಜಿಪುರ ಮೇಲ್ಸೇತುವೆ ನಿರ್ಮಾಣದಲ್ಲಿ ಅಳವಡಿಸಿಕೊಂಡಿರುವ ಪ‍್ರೆಸ್ಡ್‌ ಕಾಂಕ್ರೀಟ್‌ (ಪಿಎಸ್‌ಸಿ) ಗರ್ಡರ್‌ ವ್ಯವಸ್ಥೆಯ ಬದಲಿಗೆ, ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಬಿ–ಸ್ಮೈಲ್‌) ನಿರ್ಮಿಸುವ ಎಲಿವೇಟೆಡ್‌ ಕಾರಿಡಾರ್‌/ ಮೇಲ್ಸೇತುವೆಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಆರ್‌.ಕೆ. ಜೈಗೋಪಾಲ್‌ ಅಧ್ಯಕ್ಷತೆಯ ಬಿಬಿಎಂಪಿಯ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅನುಮೋದನೆ ನೀಡಿದೆ.

ಪಿಎಸ್‌ಸಿ ಅಥವಾ ಆರ್‌ಸಿಸಿಗಿಂತ ಯುಎಚ್‌ಪಿಎಫ್‌ಆರ್‌ಸಿ ಗುಣಮಟ್ಟ, ಶಕ್ತಿಯುತವಾಗಿದ್ದು, ವೇಗದ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಸಾಂಪ್ರದಾಯಿಕ ಮಾದರಿಯಂತೆ ಈ ಹೊಸ ವ್ಯವಸ್ಥೆಯಲ್ಲಿ ನಿರ್ವಹಣೆಯ ಅಗತ್ಯ ಇರುವುದಿಲ್ಲ. ಉಕ್ಕು ಮತ್ತು ಫೈಬರ್‌ನಿಂದ ನಿರ್ಮಾಣವಾಗುವ ಮೇಲ್ಸೇತುವೆ 120ಕ್ಕೂ ಹೆಚ್ಚು ವರ್ಷ ಬಾಳಿಕೆ ಬರಲಿದೆ. ಮಹಾರಾಷ್ಟ್ರದ ಲಾತೂರ್‌ನಲ್ಲಿ ಈ ತಂತ್ರಜ್ಞಾನ ಬಳಸಿ ಮೇಲ್ಸೇತುವೆ ನಿರ್ಮಿಸಲಾಗಿದೆ.

ADVERTISEMENT

ಯುಎಚ್‌ಪಿಎಫ್‌ಆರ್‌ಸಿ ಸೆಗ್‌ಮೆಂಟ್‌ 7 ಟನ್‌ ತೂಕವಿರಲಿದ್ದು, ಸಾಂಪ್ರದಾಯಿಕ ಕಾಂಕ್ರೀಟ್‌ ಸೆಗ್‌ಮೆಂಟ್‌ 32 ಟನ್‌ ಇರುತ್ತದೆ. ಈ ಮೊದಲು ಜರ್ಮನಿ ಹಾಗೂ ಚೀನಾದಲ್ಲಿ ಮಾತ್ರ ಯುಎಚ್‌ಪಿಎಫ್‌ಆರ್‌ಸಿ ಬಳಸಲಾಗುತ್ತಿತ್ತು. ಇಲ್ಲಿ ತಯಾರಾಗಬೇಕಿದ್ದರೆ, ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಬೇಕಿತ್ತು. ‘ಮೇಕ್‌ ಇನ್‌ ಇಂಡಿಯಾ’ದಡಿ ಹಲವು ಸಂಸ್ಥೆಗಳು ಭಾರತದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿವೆ. ರಾಜಸ್ಥಾನದ ಬೀಕಾನೆರ್‌ನಲ್ಲಿ ಸಿಲಿಕಾ ಸ್ಯಾಂಡ್‌ ಮತ್ತು ಕ್ವಾರ್ಟ್ಜ್‌ ಸಂಸ್ಥೆಗಳು ಯುಎಚ್‌ಪಿಎಫ್‌ಆರ್‌ಸಿ ಉತ್ಪಾದನಾ ಸೌಲಭ್ಯ ಹೊಂದಿವೆ. ಹೀಗಾಗಿ, ಸಾಂಪ್ರದಾಯಿಕ ಕಾಂಕ್ರೀಟ್‌ ಮಾದರಿಗಿಂತ ಹೆಚ್ಚು ಸೂಕ್ತವಾಗಿರುವ ಯುಎಚ್‌ಪಿಎಫ್‌ಆರ್‌ಸಿ ಅನ್ನು ಬಳಸಿಕೊಳ್ಳಲು ತಾಂತ್ರಿಕ ಸಲಹಾ ಸಮಿತಿ ಸಮ್ಮತಿಸಿದೆ.

ಯುಎಚ್‌ಪಿಎಫ್‌ಆರ್‌ಸಿಯಿಂದ ಶೇ 25ರಷ್ಟು ಹಣ ಹಾಗೂ ಶೇ 20ರಷ್ಟು ಸಮಯ ಉಳಿತಾಯವಾಗುತ್ತದೆ ಎಂದು ಮಹಾರಾಷ್ಟ್ರ ಹೇಳಿದ್ದರೆ, ಬಿ–ಸ್ಮೈಲ್‌ ಮೂರ್ನಾಲ್ಕು ಪಟ್ಟು ಹೆಚ್ಚು ವೆಚ್ಚವಾಗುತ್ತದೆ ಎಂದಿದೆ.

‘ಎಕ್ಸ್‌ಪ್ರೆಸ್‌ ವೇ’ವರೆಗೆ ಮೇಲ್ಸೇತುವೆ!

ನಾಯಂಡಹಳ್ಳಿ ಜಂಕ್ಷನ್‌ ಮೇಲ್ಸೇತುವೆಯನ್ನು ಮೈಸೂರು ‘ಎಕ್ಸ್‌ಪ್ರೆಸ್‌ ವೇ’ವರೆಗೆ ವಿಸ್ತರಿಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಲಹೆ ನೀಡಿದೆ. ಸಿರ್ಸಿ ವೃತ್ತದಿಂದ ನಾಯಂಡಹಳ್ಳಿವರೆಗೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವ ಯೋಜನೆಯ ಪರಾಮರ್ಶೆ ಸಂದರ್ಭದಲ್ಲಿ ‘ಮೈಸೂರು ರಸ್ತೆಯಲ್ಲಿ ನಾಯಂಡಹಳ್ಳಿ ಕೆಂಗೇರಿ ನೈಸ್‌ ರಸ್ತೆ ಬಳಿ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ಪರಿಹರಿಸಲು ನಾಯಂಡಹಳ್ಳಿ ಜಂಕ್ಷನ್‌ ಮೇಲ್ಸೇತುವೆಯಿಂದ ಮೈಸೂರು ‘ಎಕ್ಸ್‌ಪ್ರೆಸ್‌ ವೇ’ ಆರಂಭವಾಗುವ ಶ್ರೀ ಪಂಚಮುಖಿ ಗಣೇಶ ದೇವಸ್ಥಾನದವರೆಗೆ ಮೇಲ್ಸೇತುವೆ ನಿರ್ಮಿಸಬೇಕು’ ಎಂದು ಸಲಹೆ ನೀಡಲಾಗಿದೆ.

ಟಿಎಸಿ ಸಲಹೆ ಪರಿಗಣಿಸಿಲ್ಲ!

ಸರ್ಜಾಪುರದಿಂದ ಸಿಲ್ಕ್ ಬೋರ್ಡ್‌ವರೆಗಿನ ಎಲಿವೇಟೆಡ್‌ ಕಾರಿಡಾರ್‌ಗೆ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಮ್ಮತಿ ನೀಡಿದೆ. ‘ದೊಮ್ಮಲೂರಿನಲ್ಲಿ ಮೇಲ್ಸೇತುವೆ ಇದ್ದು ಈಜಿಪುರದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹಳೆ ಮದ್ರಾಸ್‌ ರಸ್ತೆಯಿಂದ ಸರ್ಜಾಪುರದವರೆಗಿನ ಎಲಿವೇಟೆಡ್‌ ಕಾರಿಡಾರ್ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಆದರೂ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿರುವ ಪ್ರಸ್ತಾವದಲ್ಲಿ ಅದನ್ನೂ ಸೇರಿಸಲಾಗಿದೆ. ನಾಲ್ಕು ಎಲಿವೇಟೆಡ್‌ ಕಾರಿಡಾರ್‌ಗಳ ಅಂದಾಜು ಪಟ್ಟಿಯನ್ನು ರತ್ನಾಕರ ರೆಡ್ಡಿ (ಇನ್‌ಫ್ರಾ ಸಪೋರ್ಟ್‌) ಅವರು ನೀಡಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಮುಂದೆ ಹೇಳಲಾಗಿದೆ. ಡಿಪಿಆರ್‌ ಸೇರಿದಂತೆ ಎಲ್ಲ ಮಾಹಿತಿಯನ್ನು ಟಿಎಸಿ ಮುಂದೆ ವಿವರವಾಗಿ ಚರ್ಚೆ ನಡೆಸದೆ ಸಮಿತಿಯ ಅಭಿಪ್ರಾಯದೊಂದಿಗೆ ಯೋಜನೆಗೆ ಅನುಮತಿ ಪ‍ಡೆಯಲು ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಬಿ–ಸ್ಮೈಲ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್‌. ಪ್ರಹ್ಲಾದ್‌ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ.

ಎಲ್ಲೆಲ್ಲಿ ಮೇಲ್ಸೇತುವೆ/ ಎಲಿವೇಟೆಡ್‌ ಕಾರಿಡಾರ್‌?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.