ADVERTISEMENT

ತುರ್ತು ಪರಿಸ್ಥಿತಿಯಿಂದಾಗಿ ಮಹನೀಯರ ಒಡನಾಟ ಸಿಕ್ಕಿತು: ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 14:12 IST
Last Updated 7 ನವೆಂಬರ್ 2025, 14:12 IST
ಸುರೇಶ್‌ ಕುಮಾರ್
ಸುರೇಶ್‌ ಕುಮಾರ್   

ಬೆಂಗಳೂರು: ‘ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರಿಂದ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಈ ಜೈಲುವಾಸವು ಲಾಲ್ ಕೃಷ್ಣ ಅಡ್ವಾಣಿ, ಮಧು ದಂಡವತೆ, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ದತ್ತಾತ್ರೇಯ ಹೊಸಬಾಳೆಯಂಥ ಮಹನೀಯರ ಒಡನಾಟ ಸಿಗಲು ಕಾರಣವಾಯಿತು’ ಎಂದು ಶಾಸಕ ಸುರೇಶ್‌ ಕುಮಾರ್‌ ನೆನಪು ಮಾಡಿಕೊಂಡರು.

‘ತುರ್ತು ಪರಿಸ್ಥಿತಿಯ ನಮ್ಮ ಆ ಬಂಧನದ 50 ವರ್ಷದ ನೆನಪು’ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘15 ತಿಂಗಳ ಜೈಲುವಾಸ ನನಗೆ ಜೀವನದ ಹೊಸ ನೀತಿ ಪಾಠ ಕಲಿಸಿತು. ಪ್ರಜಾಪ್ರಭುತ್ವ ವಿರೋಧಿ ತುರ್ತುಪರಿಸ್ಥಿತಿಯ ಕರಾಳ ದಿನಗಳು, ಅಂದು ಅನುಭವಿಸಿದ ಸಂಕಷ್ಟಗಳು, ಹೋರಾಟ ಇಂದಿಗೂ ಮರೆಯುವಂತಿಲ್ಲ’ ಎಂದು ತಿಳಿಸಿದರು.

ADVERTISEMENT

‘ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ ಅವರಣದಲ್ಲಿ 1975ರ ನವೆಂಬರ್ 7ರಂದು ಕರಾಳ ತುರ್ತುಪರಿಸ್ಥಿತಿಯ ನೈಜ ಪರಿಸ್ಥಿತಿಯನ್ನು ಕಾಮನ್ ವೆಲ್ತ್ ದೇಶಗಳ ಪ್ರತಿನಿಧಿಗಳಿಗೆ ವಿವರಿಸಲು ಕರಪತ್ರ ನೀಡಲು ಹೋದಾಗ ಬಂಧಿಸಿದ್ದರು. ನನ್ನ ಜೊತೆಯಲ್ಲಿ ಗೆಳೆಯರಾದ ಗೋವರ್ಧನ್, ಡಿ.ಜೆ.ಸುರೇಶ್ ಅವರನ್ನೂ ಬಂಧಿಸಲಾಗಿತ್ತು. ಪೊಲೀಸ್‌ ಠಾಣೆಯಲ್ಲಿ 12 ಪೊಲೀಸರು ಒದ್ದರು. ಬಾಯಿಬಿಡಿಸಲು ಏರೋಪ್ಲೇನ್ ಹತ್ತಿಸಿದ್ದರು. ಪುಟ್‌ಬಾಲ್‌ನಂತೆ ಒದ್ದು ಚಿತ್ರಹಿಂಸೆ ನೀಡಿದ್ದರು. ಐದು ಅಡಿ ಜಾಗದ ಲಾಕಪ್‌ನಲ್ಲಿ ಕೂಡಿಹಾಕಿದ್ದರು’ ಎಂದು ಹೇಳಿದರು.

‘ನನ್ನ ತಾಯಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದರು. ನಂತರ ನನ್ನನ್ನು ಪೊಲೀಸ್ ಕಮಿಷನರ್ ಕಚೇರಿಗೆ ಕರೆದುಕೊಂಡು ಹೋಗಿ ಪೋಟೊ ತೆಗೆಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಅಲ್ಲಿಂದ 15 ತಿಂಗಳು ಜೈಲುವಾಸ ಅನುಭವಿಸಿದೆ’ ಎಂದು ವಿವರಿಸಿದರು.

ಬಿಜೆಪಿ ಮುಖಂಡರಾದ ರಂಗಣ್ಣ, ಸುದರ್ಶನ್, ಪ್ರಧಾನ ಗಿರೀಶ್ ಗೌಡ, ರಾಜಣ್ಣ, ಎಚ್.ಆರ್. ಕೃಷ್ಣಪ್ಪ, ವಿಜಯಕುಮಾರ್, ಕಾಮಧೇನು ಸುರೇಶ್, ಗಂಗಾಧರ್, ಸುನೀಲ್ ಶಿವಾನಂದ್, ಗೌತಮ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.