ಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ಶುಕ್ರವಾರ ನಡೆಯಿತು.
ಮಹದೇವಪುರ ವಿಭಾಗದ ಹಗದೂರು ವ್ಯಾಪ್ತಿಯ ವೈಟ್‌ಫೀಲ್ಡ್ ಮುಖ್ಯರಸ್ತೆಯ ವರ್ತೂರು ಕೋಡಿಯಿಂದ ಹೋಪ್ ಫಾರ್ಮ್‌ವರೆಗೆ, ಗರುಡಾಚಾರ್‌ಪಾಳ್ಯದ ಸಿಂಗಯ್ಯಪಾಳ್ಯ ಮೆಟ್ರೊ ನಿಲ್ದಾಣದ ಬಳಿ, ವಿಜಿನಾಪುರ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಪಾದಚಾರಿ ಮಾರ್ಗಗಳಲ್ಲಿ ನಿರ್ಮಿಸಿದ್ದ ಪೆಟ್ಟಿಗೆ ಅಂಗಡಿಗಳು, ವಾಣಿಜ್ಯ ಮಳಿಗೆಗಳ ಮುಂದಿನ ಚಾವಣಿಗಳು, ತಾತ್ಕಾಲಿಕ ಚಾವಣಿ, ತಳ್ಳುವ ಗಾಡಿಗಳು, ಹಣ್ಣಿನ ಅಂಗಡಿಗಳು, ಕಟ್ಟಡದ ಅವಶೇಷಗಳು, ಅನಧಿಕೃತ ಕೇಬಲ್‌ಗಳು, ಫುಟ್‌ಪಾತ್‌ನಲ್ಲಿನ ಹೋಟೆಲ್ ಮುಂತಾದವುಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಅನುವು ಮಾಡಿಕೊಡಲಾಯಿತು.
ಮಹದೇವಪುರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಈಗಾಗಲೇ ನಿಗದಿಪಡಿಸಿರುವ ದಿನಾಂಕದಂತೆ ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಮಹದೇವಪುರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದರು.
ಕೆ.ಆರ್. ಪುರ ಮುಖ್ಯರಸ್ತೆ, ಬಸವನಪುರ, ಬೆಳ್ಳಂದೂರು, ಹೂಡಿ, ವಿಜ್ಞಾನ ನಗರ ಮತ್ತು ದೇವಸಂದ್ರ ವಾರ್ಡ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಬಿ.ನಾರಾಯಣಪುರ, ಕೆ.ಆರ್. ಪುರ, ಪೈ ಲೇಔಟ್ ಪ್ರದೇಶಗಳಲ್ಲಿನ ಚರಂಡಿಗಳಲ್ಲಿ ತುಂಬಿದ್ದ ಹೂಳು ಹೊರತೆಗೆದು ಸ್ವಚ್ಛಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.