ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 13 ಕೆರೆಗಳಲ್ಲಿ ಒತ್ತುವರಿ ತೆರವು ಮಾಡಲಾಗಿದ್ದು, 7 ಎಕರೆ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆ.
‘ಹೈಕೋರ್ಟ್ ಆದೇಶದಂತೆ ಕೆರೆಗಳ ಒತ್ತುವರಿ ತೆರವಿಗೆ ಸರ್ವೆ ಹಾಗೂ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ 202 ಕೆರೆಗಳಲ್ಲಿ 162 ಕೆರೆಗಳ ಸರ್ವೆ ಕಾರ್ಯ ಮುಗಿದಿದೆ. 49 ಕೆರೆಗಳು ಒತ್ತುವರಿ ಮುಕ್ತವಾಗಿವೆ. 23 ಕೆರೆಗಳಲ್ಲಿ ಸರ್ಕಾರಿ ಒತ್ತುವರಿ ಇದ್ದು, ವಲಯಗಳೊಂದಿಗೆ ಸಮನ್ವಯ ಸಾಧಿಸಿ ತೆರವಿಗೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಾಲಿಕೆಯ ನಾಲ್ಕು ವಲಯಗಳ 13 ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೆಸಲಾಗಿದೆ. ಒಟ್ಟಾರೆ ₹242.5 ಕೋಟಿ ಮೌಲ್ಯದ 7 ಎಕರೆ 3 ಗುಂಟೆ ಒತ್ತುವರಿ ಪ್ರದೇಶ ತೆರವುಗೊಳಿಸಿ, ತಂತಿ-ಬೇಲಿ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಮಹದೇವಪುರ ವಲಯ: ದೊಡ್ಡನೆಕ್ಕುಂದಿ ಕೆರೆಯ 2 ಎಕರೆ 6 ಗುಂಟೆ ಖಾಲಿ ಪ್ರದೇಶವನ್ನು ಒತ್ತುವರಿ ಮುಕ್ತಗೊಳಿಸಿ, ತಂತಿ-ಬೇಲಿ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ವಿಭೂತಿಪುರ ಕೆರೆಯಲ್ಲಿ ಒತ್ತುವರಿಯಾಗಿದ್ದ 8 ಗುಂಟೆ ಪ್ರದೇಶವನ್ನು ತೆರವುಗೊಳಿಸಲಾಗಿದೆ.
ಪೂರ್ವ ವಲಯ: ಕಗ್ಗದಾಸಪುರ ಕೆರೆಯ 2.5 ಗುಂಟೆ ಜಮೀನಿನಲ್ಲಿದ್ದ ಶೆಡ್ ಅನ್ನು ತೆರವುಗೊಳಿಸಲಾಗಿದೆ ಹಾಗೂ 22.5 ಗುಂಟೆ ಖಾಲಿ ಜಾಗಕ್ಕೆ ತಂತಿ ಬೇಲಿಯನ್ನು ಅಳವಡಿಸಲಾಗುತ್ತಿದೆ.
ಬೊಮ್ಮನಹಳ್ಳಿ ವಲಯ: ಕೋಣನಕುಂಟೆ ಕೆರೆಯ ಖಾಲಿ ಜಾಗದ 30 ಗುಂಟೆ ಜಾಗವನ್ನು ವಶಕ್ಕೆ ಪಡೆದು ತಂತಿ ಬೇಲಿಯನ್ನು ಅಳವಡಿಸಲಾಗಿದೆ. ಅರೆಕೆರೆ ಕೆರೆಯಲ್ಲಿ 12 ಗುಂಟೆ, ಸುಬ್ಬರಾಯನ ಕೆರೆಯ 28 ಗುಂಟೆ ತೆರವುಗೊಳಿಸಲಾಗಿದೆ.
ಯಲಹಂಕ ವಲಯ: ಆವಲಹಳ್ಳಿ ಕೆರೆಯಲ್ಲಿ 2 ಗುಂಟೆ, ಯಲಹಂಕ ಕೆರೆಯಲ್ಲಿ 24 ಗುಂಟೆ, ಮೇಡಿ ಅಗ್ರಹಾರ ಕೆರೆಯಲ್ಲಿ 8 ಗುಂಟೆ, ಅಗ್ರಹಾರ ಕೆರೆಯಲ್ಲಿ 4 ಗುಂಟೆ, ಕಟ್ಟಿಗೇನಹಳ್ಳಿ ಕೆರೆಯಲ್ಲಿ 1.50 ಗುಂಟೆ, ನರಸೀಪುರ ಕೆರೆಯಲ್ಲಿ 25 ಗುಂಟೆ, ಸಿಂಗಾಪುರ ಕೆರೆಯಲ್ಲಿ 29.50 ಗುಂಟೆ ಸೇರಿ ಒಟ್ಟು ಏಳು ಕೆರೆಗಳಲ್ಲಿ 2 ಎಕರೆ 14 ಗುಂಟೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿರುತ್ತದೆ ಎಂದು ಪ್ರೀತಿ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಆಡಳಿತ ವಿಭಾಗದ ವಿಶೇಷ ಆಯುಕ್ತರು ನವೆಂಬರ್ 13ರಂದು ‘ತಿಳಿವಳಿಕೆ ಪತ್ರ’ ಜಾರಿ ಮಾಡಿ ಅವರ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿಯನ್ನು ನವೆಂಬರ್ 25ರೊಳಗೆ ತೆರವು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ನವೆಂಬರ್ 27ರೊಳಗೆ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದರು. ತನ್ನ ವ್ಯಾಪ್ತಿಯ ಕೆರೆಗಳಲ್ಲಿ 851 ಎಕರೆ ಒಟ್ಟು ಒತ್ತುವರಿ ತೆರವು ಬಾಕಿ ಇದೆ ಎಂದು ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಒತ್ತುವರಿ ತೆರವು ಕ್ರಿಯಾಯೋಜನೆಯಲ್ಲಿ ಬಿಬಿಎಂಪಿ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.