ADVERTISEMENT

ಒತ್ತುವರಿ ತೆರವು ಜಾಗ ಅರ್ಕಾವತಿ ಬಡಾವಣೆಗೆ ಸ್ವಾಧೀನವಾಗಿದ್ದು: ಬಿಡಿಎ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 23:45 IST
Last Updated 9 ಜನವರಿ 2026, 23:45 IST
ಬಿಡಿಎ
ಬಿಡಿಎ   

ಬೆಂಗಳೂರು: ಥಣಿಸಂದ್ರದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವು ಮಾಡಿ, ಜಾಗವನ್ನು ವಶಕ್ಕೆ ಪಡೆಯಲಾಗಿದ್ದು, ಇದನ್ನು ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 2023ರಲ್ಲಿ ಪ್ರಾಥಮಿಕ ಅಧಿಸೂಚನೆ ಹಾಗೂ 2024ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಪಷ್ಟಪಡಿಸಿದೆ.

2024ರಲ್ಲಿ ಒಂದು ಸುತ್ತಿನ ಒತ್ತುವರಿ ತೆರವುಗೊಳಿಸಿ, ಆಸ್ತಿ ಒಡೆತನವನ್ನು ಪಡೆದುಕೊಳ್ಳಲಾಗಿದೆ. ಈ ಸಂಬಂಧ ಭೂ ಮಾಲೀಕರು ಪರಿಹಾರವನ್ನು ಪಡೆದುಕೊಂಡಿದ್ದಾರೆ. 2014ರಲ್ಲಿ ಈ ಬಗ್ಗೆ ಹೈಕೋರ್ಟ್ ಆದೇಶವನ್ನು ಸಹ ಹೊರಡಿಸಿದೆ. 2021ರಲ್ಲಿ ಅರ್ಕಾವತಿ ಬಡಾವಣೆಗೆ ಸಂಬಂಧಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದರ ಹೊರತಾಗಿಯೂ, ಭೂಮಾಲೀಕರು ಅಕ್ರಮವಾಗಿ ನಿವೇಶನಗಳನ್ನು ನಿರ್ಮಿಸಿ, ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿವೇಶನ ಖರೀದಿಸಿದ 33 ಮಂದಿ ನ್ಯಾಯಾಲಯ ನೇಮಿಸಿದ ಕೇಶವನಾರಾಯಣ ಸಮಿತಿಯಲ್ಲಿ ಪ್ರಕರಣ ದಾಖಲಿಸಿದರು. ಸಮಿತಿಯು ನೋಟಿಸ್ ನೀಡಿ, ವಿಚಾರಣೆ ನಡೆಸಿ, ಅವುಗಳನ್ನು ಅಕ್ರಮ ಎಂದು 2023ರಲ್ಲಿ ಘೋಷಿಸಿ, ಪ್ರಾಧಿಕಾರದ ಸುಪರ್ದಿಗೆ ಪಡೆದುಕೊಳ್ಳುವಂತೆ ನಿರ್ದೇಶನ ನೀಡಿತು ಎಂದು ತಿಳಿಸಿದ್ದಾರೆ. 

ADVERTISEMENT

ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಪರಿಹಾರ ಪಾವತಿಸಲಾಗಿದೆ. ನ್ಯಾಯಾಲಯ ಮತ್ತು ಪರಿಶೀಲನಾ ಸಮಿತಿಯಲ್ಲಿ ಬಿಡಿಎ ಪರವಾಗಿ ನಿರ್ಧಾರವಾಗಿದೆ. ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗಿದೆ. ಭೂ ಮಾಲೀಕರು ಬಿಡಿಎಗೆ ಸೇರಿದ ಭೂಮಿಯಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿ, ಬಾಡಿಗೆ ಸಂಗ್ರಹಿಸುತ್ತಿದ್ದರು ಎಂದಿದ್ದಾರೆ.