ADVERTISEMENT

ಒತ್ತುವರಿ: ಮಹದೇವಪುರ ಕ್ಷೇತ್ರದಲ್ಲಿ ಜೆಸಿಬಿಗಳದ್ದೇ ಸದ್ದು

ನೆಲೆ ಕಳೆದುಕೊಳ್ಳುವ ಭೀತಿ, ಬರೀ ಕಣ್ಣೀರು

ಶಿವರಾಜು ಮೌರ್ಯ
Published 14 ಸೆಪ್ಟೆಂಬರ್ 2022, 20:53 IST
Last Updated 14 ಸೆಪ್ಟೆಂಬರ್ 2022, 20:53 IST
ಎಇಸಿಎಸ್ ಬಡಾವಣೆಯಲ್ಲಿ ಒತ್ತುವರಿ ತೆರವಿಗೆ ಗುರುತು ಮಾಡಲಾದ ಮನೆಯ ಕಾಂಪೌಂಡ್ ಒಡೆಯಲಾಗಿದೆ.
ಎಇಸಿಎಸ್ ಬಡಾವಣೆಯಲ್ಲಿ ಒತ್ತುವರಿ ತೆರವಿಗೆ ಗುರುತು ಮಾಡಲಾದ ಮನೆಯ ಕಾಂಪೌಂಡ್ ಒಡೆಯಲಾಗಿದೆ.   

ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಎಲ್ಲೆಡೆ ಒತ್ತುವರಿ ವಿಚಾರವಾಗಿ ಜೆಸಿಬಿಗಳದ್ದೇ ಸದ್ದು. ಕೆಲವರಿಗೆ ಮನೆ ಕಳೆದುಕೊಳ್ಳುವ ಭೀತಿ, ದುಗುಡ. ಇನ್ನು ಕೆಲವರು ಒತ್ತುವರಿ ತೆರವಿನಿಂದ ಪ್ರವಾಹದಿಂದ ಮುಕ್ತಿ ಸಿಗಲಿದೆ ಎಂಬ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಮತ್ತೊಂದೆಡೆ ಒತ್ತುವರಿ ತೆರವಿನಿಂದಾಗಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವ ಬಡವರು ಇದ್ದಾರೆ.

ಮಹದೇವಪುರದ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆಯಿಂದ ಪ್ರವಾಹಕ್ಕೆ ಕಾರಣವಾದ ಹಲವು ಜಾಗಗಳಲ್ಲಿ ಬಿಬಿಎಂಪಿ ತೆರವು ಕಾರ್ಯಾಚರಣೆ ಕೈಗೊಂಡಿದೆ.

ಬಡವರ ಮನೆಗಳನ್ನು ಗುರಿಯಾಗಿಸಿ ಒತ್ತುವರಿ ತೆರವು ಮಾಡಲಾಗುತ್ತದೆ ಎಂದು ನಿವಾಸಿಗಳು ಅಳಲು ತೋಡಿ ಕೊಂಡರು. ಸಾಲ ಮಾಡಿ ಮನೆ ಕಟ್ಟಿ ಕೊಂಡಿದ್ದು, ಈಗ ಮನೆಯೂ ಇಲ್ಲದೇ ಎಲ್ಲಿಗೆ ಹೋಗಬೇಕು ಎಂದು ಕಣ್ಣೀರು ಸುರಿಸಿದರು.

ADVERTISEMENT

ಎಇಸಿಎಸ್ ಬಡಾವಣೆಯ ಚಿನ್ನಪ್ಪನಹಳ್ಳಿ ಕೆರೆಯಿಂದ ಮುನ್ನೆಕೊಳಲು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿ ಆಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಗುರುತು ಮಾಡಿ ಮನೆ, ವಾಣಿಜ್ಯ ಕಟ್ಟಡಗಳನ್ನು ಒಡೆಯಲು ನಿಂತಿದ್ದಾರೆ. ಕಾಂಪೌಂಡ್ ಒಡೆದು ಹಾಕಲಾಗಿದೆ. ಉಳಿದ ಕಟ್ಟಡಗಳನ್ನು ಒಂದು ವಾರದೊಳಗೆ ತೆರವು ಮಾಡುವಂತೆ ಮನೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. 20ಕ್ಕೂ ಹೆಚ್ಚು ಮನೆಗಳನ್ನು ಒತ್ತುವರಿ ತೆರವಿಗಾಗಿ ಗುರುತು ಮಾಡಲಾಗಿದೆ.

’12 ವರ್ಷಗಳ ಹಿಂದೆ ನಿವೇಶನ ತೆಗೆದುಕೊಂಡು ಮನೆ ಕಟ್ಟಿಸಿದಾಗ ಇಲ್ಲಿ ಯಾವುದೇ ರೀತಿಯ ರಾಜಕಾಲುವೆ ಇರಲಿಲ್ಲ. ಸೂಕ್ತ ದಾಖಲೆಯನ್ನು ಹೊಂದಿ ನಿವೇಶನ ಖರೀದಿ ಮಾಡಲಾಗಿತ್ತು. ಸರ್ಕಾರಕ್ಕೆ ತೆರಿಗೆಯನ್ನು ಕಾಲಕಾಲಕ್ಕೆ ಪಾವತಿಸುತ್ತಾ ಬರುತ್ತಿದ್ದೇವೆ. ಸರ್ಕಾರದಿಂದ ಸರ್ವೆ ಮಾಡಿಸಿ ಮನೆ
ತೆಗೆದುಕೊಂಡಿದ್ದರೂ ಈಗ ಏಕಾಏಕಿ ನಮ್ಮ ಮನೆಯ ಜಾಗ ಒತ್ತುವರಿ ಆಗಿದೆ ಯೆಂದು ಹೇಳುತ್ತಿದ್ದಾರೆ‘
ಎಂದು ಎಇಸಿಎಸ್ ಬಡಾವಣೆ
ನಿವಾಸಿ ರೇಣು ಅಳಲು ತೋಡಿಕೊಂಡರು.

‘ಎಲ್ಲಾ ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ಕಾವೇರಿ ನೀರು ಸರಬರಾಜು ಸಂಪರ್ಕದಿಂದ ಹಿಡಿದು ಯೋಜನಾ ನಕ್ಷೆಯವರೆಗೂ ಕಾನೂನು ಪ್ರಕಾರ ದಾಖಲೆ ಹೊಂದಿ ದ್ದೇನೆ. ಯಾವುದೇ ರೀತಿಯಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿಲ್ಲ ವಾದರೂ ನಮ್ಮ ಮನೆಯನ್ನು ಒಡೆದಿದ್ದಾರೆ’ ಎಂದು ಒತ್ತುವರಿ ತೆರವಿಗೆ ಮನೆ ಕಳೆದುಕೊಂಡ ನಿವಾಸಿ ಸುಜೀತ್ ಜೈನ್ ಆರೋಪಿಸಿದರು.

‘ಸೋಮವಾರ ಇದ್ದಕ್ಕಿದ್ದಂತೆ ಐವತ್ತು ಪೊಲೀಸರೊಂದಿಗೆ ಬಂದು ಜೆಸಿಬಿಯಿಂದ ಮನೆ ತೆರವು ಮಾಡಿದ್ದಾರೆ. ಮನೆ ಒಡೆಯಲು ಸರ್ಕಾರದ ಯಾವುದಾದರೂ ಆದೇಶ ಪತ್ರ ತೋರಿಸುವಂತೆ ಕೋರಿದರೂ ತೋರಿಸಿದೆ ಮನೆ ಒಡೆದು ಹೋಗಿದ್ದಾರೆ. ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗು ತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.