
ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸುಮಾರು ₹13.20 ಕೋಟಿ ಮೌಲ್ಯದ ಒಟ್ಟು 2.36 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗುಂಡುತೋಪು, ಗೋಮಾಳ, ಬಂಡಿದಾರಿ, ಹುಲ್ಲುಗಾವಲು, ಖರಾಬು, ಸ್ಮಶಾನ ಮತ್ತು ಗೋಕಟ್ಟೆ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಯಲಹಂಕ ಹೋಬಳಿಯ ಚೊಕ್ಕನಹಳ್ಳಿ ಗ್ರಾಮದ ₹7 ಕೋಟಿ ಮೌಲ್ಯದ 7 ಗುಂಟೆ ಹದ್ದುಗಿಡದಹಳ್ಳ, ದಾಸನಪುರ ಹೋಬಳಿಯ ತಮ್ಮೇನಹಳ್ಳಿ ಗ್ರಾಮದ ₹2.25 ಕೋಟಿ ಮೌಲ್ಯದ 15 ಗುಂಟೆ ಗೋಕಟ್ಟೆ, ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ನಾಡಗೌಡಗೊಲ್ಲಹಳ್ಳಿ ಗ್ರಾಮದ ₹1 ಕೋಟಿ ಮೌಲ್ಯದ 5 ಗುಂಟೆ ಗುಂಡುತೋಪು, ಆನೇಕಲ್ ತಾಲ್ಲೂಕು ಕಸಬಾ ಹೋಬಳಿಯ ಬೆಸ್ತಮಾನಹಳ್ಳಿ ಗ್ರಾಮದಲ್ಲಿನ ₹1.20 ಕೋಟಿ ಮೌಲ್ಯದ 1.16 ಎಕರೆ ಗುಂಡುತೋಪು ಮತ್ತು ಗೋಮಾಳ ವಶಪಡಿಸಿಕೊಳ್ಳಲಾಗಿದೆ.
ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಬೈಚಗುಪ್ಪ ಗ್ರಾಮದ ₹10 ಲಕ್ಷ ಅಂದಾಜು ಮೌಲ್ಯದ 2 ಗುಂಟೆ ಬಂಡಿದಾರಿ, ಉತ್ತರಹಳ್ಳಿ ಹೋಬಳಿಯ ಉತ್ತರಿ ಗ್ರಾಮದ ₹80 ಲಕ್ಷ ಮೌಲ್ಯದ 14 ಗುಂಟೆ ಹುಲ್ಲುಗಾವಲು, ಖರಾಬು, ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದ ₹75 ಲಕ್ಷ ಮೌಲ್ಯದ 12 ಗುಂಟೆ ಖರಾಬು, ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ರಾವತ್ತನಹಳ್ಳಿ ಗ್ರಾಮದ ₹10 ಲಕ್ಷ ಅಂದಾಜು ಮೌಲ್ಯದ 5 ಗುಂಟೆ ಸ್ಮಶಾನದ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.