ADVERTISEMENT

ಕೊಳವೆಬಾವಿ, ಆರ್‌ಒ ಘಟಕ ಕಾಮಗಾರಿ ಅಕ್ರಮ ಪ್ರಕರಣ: ಬಿಬಿಎಂಪಿ ದಾಖಲೆ ಜಾಲಾಡಿದ ಇ.ಡಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 9:24 IST
Last Updated 7 ಜನವರಿ 2025, 9:24 IST
<div class="paragraphs"><p>ಜಾರಿ ನಿರ್ದೇಶನಾಲಯ</p></div>

ಜಾರಿ ನಿರ್ದೇಶನಾಲಯ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಯೋಜನೆ ಮತ್ತು ಆರ್‌ಒ ನೀರು ಶುದ್ಧೀಕರಣ ಘಟಕ ಸ್ಥಾಪನೆ ಯೋಜನೆಗಳಲ್ಲಿನ ಅಕ್ರಮ ಆರೋಪದ ದೂರಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. 

ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಬೆಳಿಗ್ಗೆ 7ಕ್ಕೇ ಬೀಡುಬಿಟ್ಟಿದ್ದ ಇ.ಡಿಯ ಏಳು ಅಧಿಕಾರಿಗಳ ತಂಡವು, 11ರ ವೇಳೆಗೆ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ದಾಳಿ ನಡೆಸಿತು. ಮುಖ್ಯ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ಅವರನ್ನು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಕಾಮಗಾರಿಗಳಿಗೆ ಸಂಬಂಧಿ
ಸಿದ ದಾಖಲೆಗಳನ್ನು ಕೇಳಿದರು. ಎಂಜಿನಿಯರಿಂಗ್‌ ವಿಭಾಗದ ವಿವಿಧ ಘಟಕಗಳ ಮುಖ್ಯಸ್ಥರನ್ನೂ ವಿಚಾರಣೆಗೆ ಒಳಪಡಿಸಿದರು ಎಂದು ಮೂಲಗಳು ಹೇಳಿವೆ.

ADVERTISEMENT

‘2016–2019ರ ಅವಧಿಯಲ್ಲಿ ನಡೆದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಅವುಗಳ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಕೇಳಿದರು. ಲಭ್ಯವಿದ್ದ ಅಷ್ಟೂ ದಾಖಲೆಗಳನ್ನು ಬಿಬಿಎಂಪಿ ಸಿಬ್ಬಂದಿ ಒದಗಿಸಿದರು. ಅವುಗಳನ್ನು ಪರಿಶೀಲಿಸಿದ ಅಧಿಕಾರಿಗಳು ಹಲವು ದಾಖಲೆಗಳನ್ನು ಮತ್ತು ಇ–ಕಡತಗಳನ್ನು ವಶಕ್ಕೆ ಪಡೆದರು’ ಎಂದು ಮೂಲಗಳು ಮಾಹಿತಿ ನೀಡಿವೆ.

‘2016–2019ರ ಮಧ್ಯೆ 9,588 ಕೊಳವೆಬಾವಿಗಳನ್ನು ಕೊರೆಸಿದ್ದು, ತಲಾ ₹10 ಲಕ್ಷ ಬಿಲ್‌ ಮಂಜೂರು ಮಾಡಿರುವ ಬಗ್ಗೆ ಬಿಬಿಎಂಪಿ ದಾಖಲೆ ಸಲ್ಲಿಸಿದೆ. ಕೊಳವೆಬಾವಿ ಕೊರೆಸಿ, ಪಂಪ್‌ಸೆಟ್‌ ಅಳವಡಿಸಲು ಅಷ್ಟು ಮೊತ್ತವಾಗುವುದಿಲ್ಲ ಎಂಬ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಜತೆಗೆ 9,588ರಲ್ಲಿ ಎಲ್ಲ ಕೊಳವೆಬಾವಿಗಳ ಚಿತ್ರ ಮತ್ತು ಸ್ಥಳ ಪರಿಶೀಲನೆ ವರದಿಗಳು ಲಭ್ಯವಿಲ್ಲ’ ಎಂದು ತಿಳಿಸಿವೆ.

‘ಅದೇ ಅವಧಿಯಲ್ಲಿ ಒಟ್ಟು 976 ಆರ್‌ಒ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ದಾಖಲೆಗಳಲ್ಲಿ ಮಾಹಿತಿ ಇದೆ. ದುಪ್ಪಟ್ಟು ದರದಲ್ಲಿ ಕಾಮಗಾರಿ ನಡೆಸಿದ್ದು, ಎಲ್ಲ ಕಾಮಗಾರಿಗಳ ಸ್ಥಳ ಪರಿಶೀಲನಾ ವರದಿ ಲಭ್ಯವಿಲ್ಲ. ಈ ನಿಟ್ಟಿನಲ್ಲೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ಅವರನ್ನು ರಾತ್ರಿ 9ರ ವೇಳೆಗೆ ಮತ್ತೆ ಕರೆದ, ಇ.ಡಿ ಅಧಿಕಾರಿಗಳು ವಿಚಾರಣೆ ಮುಂದುವರೆಸಿದರು. ಮತ್ತೊಂದು ತಂಡವು ಎಂಜಿನಿಯರಿಂಗ್‌ ವಿಭಾಗದ ಇತರ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿತು. ರಾತ್ರಿಯೂ ವಿಚಾರಣೆ ಮುಂದುವರೆದಿತ್ತು.

2019ರಲ್ಲಿ ದಾಖಲಾಗಿದ್ದ ಪ್ರಕರಣ
ಬಿಬಿಎಂಪಿ ನಡೆಸಿದ ಕೊಳವೆಬಾವಿ ಮತ್ತು ಆರ್‌ಒ ಘಟಕ ಕಾಮಗಾರಿ ಗಳಲ್ಲಿ ₹969 ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ಬಿಜೆಪಿಯ ಎನ್‌.ಆರ್‌.ರಮೇಶ್ ಅವರು 2019ರಲ್ಲಿ ಎಸಿಬಿಗೆ ದೂರು ನೀಡಿದ್ದರು. 2021ರಲ್ಲಿ ಇ.ಡಿಗೂ ಈ ಸಂಬಂಧ ಮಾಹಿತಿ ನೀಡಿದ್ದರು. 2022ರ ಡಿಸೆಂಬರ್‌ನಲ್ಲೇ ರಮೇಶ್ ಅವರಿಗೆ ಸಮನ್ಸ್‌ ನೀಡಿದ್ದ ಇ.ಡಿ, ಅವರಿಂದ ಮಾಹಿತಿ ಕಲೆಹಾಕಿತ್ತು. ನಂತರ ಬಿಬಿಎಂಪಿ ಆಯುಕ್ತರಿಗೆ ಸಮನ್ಸ್‌ ಜಾರಿ ಮಾಡಿ, ವಿಚಾರಣೆಗೆ ಸಹಕರಿಸುವಂತೆ ಸೂಚಿಸಿತ್ತು. ಇ.ಡಿಗೆ ಮಾಹಿತಿ ನೀಡಲು ಪಾಲಿಕೆಯ ಮುಖ್ಯ ಎಂಜಿನಿಯರ್ ಬಿ.ಎಸ್‌.ಪ್ರಹ್ಲಾದ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ಆಯುಕ್ತ ತುಷಾರ್ ಗಿರಿನಾಥ್ ಅವರು ನೇಮಕ ಮಾಡಿದ್ದರು. 2022ರ ಡಿಸೆಂಬರ್‌ನಲ್ಲೇ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರೂ ಇ.ಡಿಯು ಈವರೆಗೆ ಶೋಧಕಾರ್ಯ ನಡೆಸಿರಲಿಲ್ಲ. ಎರಡು ವರ್ಷಗಳ ಅಂತರದ ಬಳಿಕ ಈಗ ಶೋಧಕಾರ್ಯಕ್ಕೆ ಚಾಲನೆ ನೀಡಿದೆ.

‘₹400 ಕೋಟಿ ಅಕ್ರಮ...’

ಬಿಬಿಎಂಪಿಯ ರಾಜರಾಜೇಶ್ವರಿ ನಗರ, ಮಹದೇವಪುರ, ದಾಸರಹಳ್ಳಿ, ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಎಸಿಬಿಯಲ್ಲಿ ದೂರು ದಾಖಲಾದ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆಯ ಜಾಗೃತ ಅಧಿಕಾರಿ ಈ ಸಂಬಂಧ ತನಿಖೆ ನಡೆಸಿ, ಮುಂದಿನ ಕ್ರಮಕ್ಕಾಗಿ 2019ರಲ್ಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

‘ಬಿಬಿಎಂಪಿ ವಲಯ ಎಂಜಿನಿಯರ್‌ಗಳು, ಪಾಲಿಕೆ ಸದಸ್ಯರು, ಗುತ್ತಿಗೆದಾರರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ₹969 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ₹400 ಕೋಟಿಯಷ್ಟು ಅಕ್ರಮ ನಡೆದಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ವರದಿ ಶಿಫಾರಸು ಮಾಡಿತ್ತು.

ಶಿಫಾರಸನ್ನು ಅನುಷ್ಠಾನಕ್ಕೆ ತರಲು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಅನುಮೋದನೆ ನೀಡಿದ್ದರು. ಆದರೆ ತನಿಖೆ ಅಲ್ಲಿಗೇ ನಿಂತಿತ್ತು.

‘ಜಾಗೃತಿ ಅಧಿಕಾರಿ ನೀಡಿದ್ದ ವರದಿಯನ್ನು ವಶಕ್ಕೆ ಪಡೆದಿದ್ದ ಇ.ಡಿ ಅಧಿಕಾರಿಗಳು, ಸಂಬಂಧಿತ ವ್ಯಕ್ತಿಗಳ ವಿರುದ್ಧವೂ ತನಿಖೆ ಆರಂಭಿಸಿದ್ದಾರೆ. ಎಂಜಿನಿಯರ್‌ಗಳು, ಗುತ್ತಿಗೆದಾರರು, ಪಾಲಿಕೆ ಸದಸ್ಯರು ಮಾತ್ರವಲ್ಲದೇ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸಂಬಂಧಿಸಿದಂತೆಯೂ ಮಾಹಿತಿ ಕಲೆ ಹಾಕಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಗುತ್ತಿಗೆದಾರರ ಆಯ್ಕೆಯಲ್ಲಿ, ಕೊಳವೆಬಾವಿ ಮತ್ತು ಆರ್‌ಒ ಘಟಕಕ್ಕೆ ಸ್ಥಳ ಗುರುತಿಸುವಲ್ಲಿ ಶಾಸಕರೂ ಪ್ರಭಾವ ಬೀರಿರುವ ಬಗ್ಗೆ ಮಾಹಿತಿ ದೊರೆತಿದೆ. ಶಾಸಕರು ಮತ್ತು ಪಾಲಿಕೆ ಸದಸ್ಯರು ನೀಡಿರುವ ಶಿಫಾರಸು ಪತ್ರಗಳು, ಕೆಲವು ಕಾಮಗಾರಿಗಳನ್ನು ಪಾಲಿಕೆ ಸದಸ್ಯರೇ ಬೇನಾಮಿ ಹೆಸರಿನಲ್ಲಿ ನಡೆಸಿರುವುದಕ್ಕೆ ಸಂಬಂಧಸಿದ ದಾಖಲೆಗಳು ದೊರೆತಿವೆ’ ಎಂದು ಮೂಲಗಳು ತಿಳಿಸಿವೆ.

ಇ.ಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ನೀಡಿದ್ದೇವೆ. ಕಡತಗಳ ಪರಿಶೀಲನೆಗೆ ಇಲ್ಲೇ ಒಂದು ಕೊಠಡಿ ನೀಡಿ ಎಂದೂ ಸೂಚಿಸಿದ್ದಾರೆ.
ಬಿ.ಎಸ್‌.ಪ್ರಹ್ಲಾದ್‌, ಬಿಬಿಎಂಪಿ ಮುಖ್ಯ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.