ADVERTISEMENT

ಎಂಜಿನಿಯರಿಂಗ್‌ ಸೀಟು ಬ್ಲಾಕಿಂಗ್ ಪ್ರಕರಣ: ₹1.37 ಕೋಟಿ ನಗದು ಜಪ್ತಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 0:01 IST
Last Updated 29 ಜೂನ್ 2025, 0:01 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ಬೆಂಗಳೂರು: ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನಡೆಸಿದ ಶೋಧ ಕಾರ್ಯ ವೇಳೆ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 

2024–25ನೇ ಸಾಲಿನ ಸಿಇಟಿಯಲ್ಲಿ ಸರ್ಕಾರಿ ಕೋಟಾದಡಿ ಈ ಕಾಲೇಜುಗಳಿಗೆ ಹಂಚಿಕೆಯಾಗಿದ್ದ ಎಂಜಿನಿಯರಿಂಗ್‌ ಸೀಟುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಎಇ) ಪೊಲೀಸರಿಗೆ ದೂರು ನೀಡಿತ್ತು.

ಈ ಪ್ರಕರಣದಲ್ಲಿ ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದ ಇ.ಡಿ. ಜೂನ್ 25 ಮತ್ತು 26ರಂದು ಬಿಎಂಎಸ್ ಎಂಜಿನಿಯರಿಂಗ್‌ ಕಾಲೇಜು, ಆಕಾಶ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಮತ್ತು ನ್ಯೂ ಹೊರೈಜಾನ್‌ ಕಾಲೇಜ್ ಆಫ್‌ ಎಂಜಿನಿಯರಿಂಗ್‌ನ ಕಚೇರಿಗಳು ಸೇರಿ ನಗರದ 17 ಕಡೆ ಜಾರಿ ಶೋಧಕಾರ್ಯ ನಡೆಸಿತ್ತು. ಈ ವೇಳೆ ಡಿಜಿಟಲ್ ಸಾಕ್ಷ್ಯಗಳು, ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು, ಅಂದಾಜು ₹1.37 ಕೋಟಿ ನಗದು ಪತ್ತೆಯಾಗಿದ್ದು, ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಹಗರಣದಲ್ಲಿ ಮಧ್ಯವರ್ತಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಭಾಗಿಯಾಗಿವೆ. ಖಾಸಗಿ ಸಂಸ್ಥೆಗಳಲ್ಲಿ ಬೇಡಿಕೆಯಿರುವ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶದ ವೇಳೆ ಹಣದ ವಹಿವಾಟು ನಡೆದಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

‘ಸೀಟ್‌ ಬ್ಲಾಕಿಂಗ್‌ ಹಲವು ವರ್ಷಗಳಿಂದ ನಡೆಯುತ್ತಿರುವ ಬಗ್ಗೆ ಅನುಮಾನವಿದ್ದು, ನಾಲ್ಕು ವರ್ಷಗಳ ದಾಖಲಾತಿ ವಿವರಗಳನ್ನು ಕಲೆ ಹಾಕಲಾಗಿದೆ. ಕೆಎಇಯಿಂದಲೂ ಸರ್ಕಾರಿ ಕೋಟಾದ ಸೀಟುಗಳ ವಿವರ ಪಡೆದುಕೊಂಡಿದ್ದು, ಕಾಲೇಜಿನ ದಾಖಲಾತಿಗಳನ್ನು ತಾಳೆ ನೋಡಲಾಗುತ್ತಿದೆ. ಈ ನಾಲ್ಕು ವರ್ಷದಲ್ಲೂ ಸಾವಿರಾರು ಸೀಟುಗಳನ್ನು, ಸೀಟ್‌ ಬ್ಲಾಕಿಂಗ್‌ ಮೂಲಕ ಮಾರಾಟ ಮಾಡಿರುವ ಸುಳಿವು ದೊರೆತಿದೆ’ ಎಂದು ಇ.ಡಿ ಮೂಲಗಳು ಖಚಿತಪಡಿಸಿವೆ.

ಸಾವಿರಾರು ಸೀಟುಗಳ ಬ್ಲಾಕಿಂಗ್‌ ಸುಳಿವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.