ADVERTISEMENT

ಇನ್ನೂ 1 ಸಾವಿರ ಉಭಯ ಮಾಧ್ಯಮ ಶಾಲೆ

ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಮೇ 2020, 19:48 IST
Last Updated 27 ಮೇ 2020, 19:48 IST
ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್
ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್   

ಬೆಂಗಳೂರು: ‘ಜಾಗತಿಕ ನಿರೀಕ್ಷೆಗೆ ತಕ್ಕಂತೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ತಯಾರು ಮಾಡಲು ಮತ್ತು ಶಾಲೆಗಳನ್ನು ಉಳಿಸಿ ಬೆಳೆಸಲು ಈ ವರ್ಷ ಇನ್ನೂ 1 ಸಾವಿರ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್‌ ಮಾಧ್ಯಮವನ್ನೂ ಆರಂಭಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ತಿಳಿಸಿದರು.

ಬುಧವಾರ ಡಿಡಿಪಿಐಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ‘ಈಗಾಗಲೇ ಒಂದು ಸಾವಿರ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್‌ ಮಾಧ್ಯಮವನ್ನು ಕಲಿಸಲಾಗುತ್ತಿದೆ. ಅದನ್ನು ಇನ್ನೂ ಒಂದು ಸಾವಿರ ಶಾಲೆಗಳಿಗೆ ವಿಸ್ತರಿಸಲಾಗುತ್ತದೆ’ ಎಂದರು.

‘400 ಉರ್ದು ಮಾಧ್ಯಮ ಶಾಲೆಗಳಲ್ಲಿ ಸಹ ಈ ವರ್ಷದಿಂದಲೇ ಇಂಗ್ಲಿಷ್‌ ಮಾಧ್ಯಮವನ್ನೂ ಕಲಿಸುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದರು.

ADVERTISEMENT

ಕನ್ನಡ ನಿರ್ಲಕ್ಷ್ಯ–ಎಚ್ಚರಿಕೆ: ‘ಕನ್ನಡ ನೆಲದಲ್ಲಿ ನಡೆಯುವಂತಹ ಯಾವುದೇ ಶಾಲೆಯಾಗಿದ್ದರೂ ಅಲ್ಲಿ ಕನ್ನಡ ಭಾಷೆಯ ಬೋಧನೆ ಕಡ್ಡಾಯವಾಗಿ ಆಗಲೇಬೇಕು. ಈ ಸಂಬಂಧದ ಕಡ್ಡಾಯ ಕನ್ನಡ ಕಲಿಕಾ ಮಸೂದೆ-2015ರ ಅನುಷ್ಠಾನಕ್ಕೆ ನಿರ್ಲಕ್ಷ್ಯ ತೋರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಸಚಿವರು ಎಚ್ಚರಿಕೆ ನೀಡಿದರು.

‘2015ರಲ್ಲಿ ಜಾರಿಗೆ ತರಲಾದ ಕನ್ನಡ ಕಲಿಕಾ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಕಟಿಬದ್ಧವಾಗಿದೆ. ಕನ್ನಡ ನೆಲದಲ್ಲಿ ಓದುವ ಪ್ರತಿಯೊಂದು ಮಗುವೂ ಕನ್ನಡವನ್ನು ಕಲಿಯಬೇಕು. ಅರ್ಹ ಶಿಕ್ಷಕರು ಈ ಮಕ್ಕಳಿಗೆ ಕನ್ನಡ ಕಲಿಸಬೇಕು. ಇದನ್ನು ಕರ್ನಾಟಕದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಥೈಸಿಕೊಂಡು ಮಕ್ಕಳ ಹಿತದೃಷ್ಟಿಯಿಂದ ಸರ್ಕಾರದ ಈ ಕ್ರಮವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಕೂಲಿ ಹಣ ವ್ಯಯಿಸಬೇಡಿ’

‘ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವರದಿ ನೀಡಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ಉಳಿಸಿಕೊಳ್ಳುವುದು ನಮ್ಮ ಉದ್ದೇಶ. ಕೂಲಿ ಮಾಡಿ ಜೀವನ ಸಾಗಿಸುವವರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗಿ ತಮ್ಮ ಸಂಪಾದನೆಯ ಶೇ 40ರಷ್ಟನ್ನು ವ್ಯಯಿಸಬಾರದು ಎಂಬ ಕಾಳಜಿಯೊಂದಿಗೆ ಉಭಯ ಮಾಧ್ಯಮ ಶಿಕ್ಷಣದಂತಹ ವ್ಯವಸ್ಥೆ ರೂಪಿಸಲಾಗುತ್ತಿದೆ’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.