ADVERTISEMENT

‘ಪರಿಸರ ಸಂರಕ್ಷಣೆ: ಪ್ರಣಾಳಿಕೆಯಲ್ಲಿ ಆದ್ಯತೆ ಸಿಗಲಿ’

ಪ್ಲಾಸ್ಟಿಕ್‌ ಬಳಕೆ ಮೇಲಿನ ತೆರಿಗೆ ಶೇ 300ರಷ್ಟು ಹೆಚ್ಚಿಸಿ: ಬೆಂಗಳೂರಿನಲ್ಲಿ ಪರಿಸರ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 19:53 IST
Last Updated 24 ಮಾರ್ಚ್ 2019, 19:53 IST
ಪುರಭವನದ ಬಳಿ ಧರಣಿನಿರತ ಪರಿಸರ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಪುರಭವನದ ಬಳಿ ಧರಣಿನಿರತ ಪರಿಸರ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಾಗತಿಕ ತಾಪಮಾನ ತುರ್ತು ಪರಿಸ್ಥಿತಿ ಘೋಷಣೆಗೆ ಆಗ್ರಹಿಸಿ ಪರಿಸರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪರಿಸರ ಕಾರ್ಯಕರ್ತರು ಪುರಭವನದ ಬಳಿ ಭಾನುವಾರ ಧರಣಿ ನಡೆಸಿದರು.

ಪ್ರಕೃತಿ ವಿಸ್ಮಯಗಳ ಕಣಜ. ಮಾನವ ಹಸ್ತಕ್ಷೇಪದಿಂದ ಜಗತ್ತು 6ನೇ ಮಹಾನಾಶದ ಭೀತಿ ಎದುರಿಸುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮಾನವನಿರ್ಮಿತ ಹವಾಮಾನ ವೈಪರೀತ್ಯ ಸರಿಪಡಿಸಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದರು.

‘ಜನರ ಲಾಭ ಮತ್ತು ಮೋಜಿಗಾಗಿ ಅರಣ್ಯ ನಾಶ ಮಾಡುವ ಮೂಲಕ ಇಡೀ ನಾಗರಿಕತೆಯನ್ನು ಮತ್ತು ಸಮಸ್ತ ಜೀವಸಂಕುಲವನ್ನು ಬಲಿ ಕೊಡುವುದು ಸರಿಯಲ್ಲ. ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಪರಿಸರ ಸಂರಕ್ಷಣೆ ಆದ್ಯತಾ ವಿಷಯವಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪರಿಸರ ಸಂರಕ್ಷಣೆ ಕುರಿತು ರಾಜ್ಯದಾದ್ಯಂತ ಆಂದೋಲನ ರೂಪಿಸಲಿದ್ದೇವೆ. ಹಲವು ಬೇಡಿಕೆಗಳನ್ನು ‌ಒಳಗೊಂಡ ಮನವಿಯನ್ನು ರಾಜಕೀಯ ಪಕ್ಷಗಳಿಗೆ ಸಲ್ಲಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ತುರ್ತು ಅಗತ್ಯವಿದೆ. ಈ ಸಲುವಾಗಿ ಪ್ಲಾಸ್ಟಿಕ್‌ ಉತ್ಪನ್ನಗಳ ಮೇಲೆ ದುಬಾರಿ ತೆರಿಗೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪರಿಸರ ಕಾರ್ಯಕರ್ತರಾದ ಸಂಜೀವ ಕುಲಕರ್ಣಿ, ನಾಗೇಶ್‌ ಹೆಗಡೆ, ಆರ್.ಪಿ. ವೆಂಕಟೇಶಮೂರ್ತಿ, ಎಚ್‌.ಎ. ಕಿಶೋರ್‌ಕುಮಾರ್, ಮೀನಾಕ್ಷಿ, ಜನಾರ್ಧನ್, ಅಶೋಕ್‌ಕುಮಾರ್ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.