ADVERTISEMENT

ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ: ರಾಜೇಶ್ವರಿ ರಾಜಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 16:29 IST
Last Updated 23 ಮಾರ್ಚ್ 2025, 16:29 IST
ಜಯನಗರದ ಸರ್ ಎಂ ವಿಶ್ವೇಶ್ವರಯ್ಯ ಮಳೆನೀರು ಸಂಗ್ರಹ ಥೀಮ್ ಪಾರ್ಕ್‌ನಲ್ಲಿ ನಡೆದ ‘ನಮ್ಮ ಪ್ಲಂಬರ್ ನಮ್ಮ ಹೀರೋ’ ಸಂವಾದ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಪರಿಸರಾಸಕ್ತರು ಭಾಗವಹಿಸಿದ್ದರು.
ಜಯನಗರದ ಸರ್ ಎಂ ವಿಶ್ವೇಶ್ವರಯ್ಯ ಮಳೆನೀರು ಸಂಗ್ರಹ ಥೀಮ್ ಪಾರ್ಕ್‌ನಲ್ಲಿ ನಡೆದ ‘ನಮ್ಮ ಪ್ಲಂಬರ್ ನಮ್ಮ ಹೀರೋ’ ಸಂವಾದ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಪರಿಸರಾಸಕ್ತರು ಭಾಗವಹಿಸಿದ್ದರು.   

ಬೆಂಗಳೂರು: ‘ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ’ ಎಂದು ರಾಜಸ್ಥಾನದ ಜೈಸಲ್ಮೇರ್ ರಾಜವಂಶಸ್ಥೆ ರಾಜೇಶ್ವರಿ ರಾಜಲಕ್ಷ್ಮಿ ಹೇಳಿದರು.

ಜಯನಗರದ ಸರ್.ಎಂ. ವಿಶ್ವೇಶ್ವರಯ್ಯ ಮಳೆನೀರು ಸಂಗ್ರಹ ಥೀಮ್ ಪಾರ್ಕ್‌ನಲ್ಲಿ ಪರ್ಯಾವರಣ ಸಂರಕ್ಷಣ ಗತಿ ವಿಧಿ ಆಯೋಜಿಸಿದ್ದ ‘ನಮ್ಮ ಪ್ಲಂಬರ್ ನಮ್ಮ ಹೀರೊ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮಗೆ ಜೀವಿಸಲು ಬೇಕಾದ ವಸ್ತುಗಳನ್ನು ಪ್ರಕೃತಿ ಉಚಿತವಾಗಿ ನೀಡುತ್ತದೆ. ಅದಕ್ಕಾಗಿ ಉಪಕಾರ ಸ್ಮರಣೆ ದೃಷ್ಟಿಯಿಂದ ನಾವು ಪ್ರಕೃತಿಯ ಭಾಗವಾದ ಜಲವನ್ನು ಗೌರವಯುತವಾಗಿ ನೋಡಬೇಕು. ಮಿತ ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್‌ ಎಸ್. ಎನ್.ಪಾಂಡೆ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ದೇಶದ ಎಲ್ಲ ಮಹಾನಗರಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಪ್ರತಿ ಮನೆಯಲ್ಲೂ ಮಳೆ ನೀರು ಸಂಗ್ರಹ ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬಹುತೇಕ ಮಹಾನಗರಗಳಿಗೆ ಹೊರಗಡೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಬವಣೆ ತೀವ್ರವಾಗಿರುತ್ತದೆ. ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮಾತ್ರ ಹಿಂಗಾರು, ಮುಂಗಾರು ಅವಧಿಯಲ್ಲಿ ಮಳೆಯಾಗುತ್ತದೆ. ಹಾಗಾಗಿ, ಇಲ್ಲಿನ ನಿವಾಸಿಗಳು ಕೊಳವೆ ಬಾವಿ ಅಥವಾ ಕಾವೇರಿ ನೀರಿನ ಮೇಲೆ ಅವಲಂಬಿತವಾಗದೆ ಮಳೆ ನೀರು ಸಂಗ್ರಹ ಅಳವಡಿಸಿಕೊಳ್ಳುವುದು ಉತ್ತಮ’ ಎಂದರು.

ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ ಅಧ್ಯಕ್ಷ ಬಾಲಕೃಷ್ಣ ಮೆಹತಾ ಮಾತನಾಡಿ, ‘ಅನಗತ್ಯವಾಗಿ ನೀರು ಪೋಲು ಮಾಡಬಾರದು. ನೀರು ಉಳಿಸಲು ಸರ್ಕಾರ ಮಾತ್ರವಲ್ಲ ಸಾರ್ವಜನಿಕರೂ ಪ್ರಯತ್ನಿಸಬೇಕು’ ಎಂದು ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್‌ ಯು.ನಳಿನಾಕ್ಷಿ ಮಾತನಾಡಿ, ‘ಬೆಂಗಳೂರಿನಲ್ಲಿ ಸಾಕಷ್ಟು ನೀರಿನ ಸಂಪನ್ಮೂಲಗಳಿದ್ದರೂ ಕೊಳವೆಬಾವಿಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಉಂಟಾಗಲಿದೆ’ ಎಂದು ಎಚ್ಚರಿಸಿದರು.

ಪರ್ಯಾವರಣ ಸಂರಕ್ಷಣ ಗತಿವಿಧಿ ಜಲ ಆಯಾಮ ಪ್ರಮುಖ ಕೆ.ಆರ್ ಶ್ರೀಹರ್ಷ ಸಂವಾದ ನಡೆಸಿಕೊಟ್ಟರು. ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಸನತ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.