ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಸದಸ್ಯರು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ನಿವೃತ್ತ ನೌಕರರು ಘೋಷಣೆಗಳನ್ನು ಕೂಗಿ, ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕನಿಷ್ಠ ₹7,500 ಪಿಂಚಣಿ ಹಾಗೂ ಭತ್ಯೆ, ವೈದ್ಯಕೀಯ ಸೌಲಭ್ಯ ನೀಡಬೇಕು. ಇಪಿಎಸ್ ವ್ಯಾಪ್ತಿಗೆ ಬಾರದ ನಿವೃತ್ತ ನೌಕರರಿಗೆ ₹5 ಸಾವಿರ ನೀಡಬೇಕು. 2014ರಿಂದ ಇಪಿಎಸ್ ನಿವೃತ್ತರಿಗೆ ₹1000 ನೀಡಲಾಗುತ್ತಿದೆ. ಇನ್ನೂ ಕೆಲವರು ಒಂದು ಸಾವಿರ ರೂಪಾಯಿಗಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.
ಅಕ್ಟೋಬರ್ 11 ಮತ್ತು 12ರಂದು ನಗರದಲ್ಲಿ ನಡೆಯಲಿರುವ 238ನೇ ಸಿಬಿಟಿ ಸಭೆಯಲ್ಲಿ ಇಪಿಎಸ್ ನಿವೃತ್ತರ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ಹಾಗೂ ಆರ್.ಸಿ.ಗುಪ್ತ ಹಾಗೂ ಸುನಿಲ್ ಕುಮಾರ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಬೇಕು. ಸಿಬಿಟಿ ಸಭೆಯಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸರದಿ ಪ್ರಕಾರ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎನ್‌ಎಸಿ ರಾಜ್ಯ ಘಟಕದ ಅಧ್ಯಕ್ಷ ಜಿಎಸ್‌ಎಂ ಸ್ವಾಮಿ, ಮುಖಂಡ ಬ್ರಹ್ಮಚಾರಿ ತಿಳಿಸಿದರು.
ಅಧಿಕಾರಿಗಳ ಮೂಲಕ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.