ADVERTISEMENT

ಬೆಂಗಳೂರು ಮಾಲಿನ್ಯ ತಡೆಯಲು ಶೀಘ್ರವೇ ನಗರದ ಶಾಸಕರ ಸಭೆ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 14:31 IST
Last Updated 26 ಫೆಬ್ರುವರಿ 2026, 14:31 IST
ಬೆಂಗಳೂರು ನಗರದ ಪರಿಸರ ಮಾಲಿನ್ಯದ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಈಶ್ವರ ಖಂಡ್ರೆ,  ಎಸ್‌.ಸುರೇಶ್ ಕುಮಾರ್ ಮತ್ತು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು ನಗರದ ಪರಿಸರ ಮಾಲಿನ್ಯದ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಈಶ್ವರ ಖಂಡ್ರೆ,  ಎಸ್‌.ಸುರೇಶ್ ಕುಮಾರ್ ಮತ್ತು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.   

ಬೆಂಗಳೂರು: ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ‘ಗ್ಯಾಸ್ ಚೇಂಬರ್’ ಆಗದಂತೆ ಕ್ರಮ ಕೈಗೊಳ್ಳಲು ನಗರದ ಎಲ್ಲ 28 ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ರಾಜಾಜಿನಗರ ಶಾಸಕ ಸುರೇಶ್‌ಕುಮಾರ್ ಅವರ ಕೋರಿಕೆಯ ಮೇರೆಗೆ ಗುರುವಾರ ಉನ್ನತಾಧಿಕಾರಿಗಳ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನ ಪ್ರತಿನಿಧಿಗಳ ಸಹಕಾರ ಅಗತ್ಯವಿದೆ ಎಂದರು.

ಸುರೇಶ್‌ಕುಮಾರ್ ವಿಷಯ ಪ್ರಸ್ತಾಪಿಸಿ, ‘ಬೆಂಗಳೂರು ನಗರದಲ್ಲಿ ರಸ್ತೆಯಲ್ಲಿನ ದೂಳಿನಿಂದಾಗಿ ವಾಯು ಗುಣಮಟ್ಟ ಕ್ಷೀಣಿಸುತ್ತಿದ್ದು, ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಈ ಕಾರಣದಿಂದ ಬೆಂಗಳೂರು ಹೊರ ವಲಯಕ್ಕೆ ಹೋಗುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ವಾಯು ಗುಣಮಟ್ಟ ಕಾಪಾಡಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಇದಕ್ಕೆ ಸ್ಪಂದಿಸಿದ ಪರಿಸರ ಸಚಿವರು, ‘ಈಗಾಗಲೇ ಬೆಂಗಳೂರಿನ 11 ಸ್ಥಳಗಳಲ್ಲಿ ಸ್ಥಾಪಿತ ಮತ್ತು 13 ಸಂಚಾರಿ ಘಟಕಗಳ ಮೂಲಕ ವಾಯು ಗುಣಮಟ್ಟ ಸೂಚ್ಯಂಕದ ಮೌಲ್ಯಮಾಪನ ಮಾಡಲಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯವು 100 ದಾಟಿದರೆ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡಿ ನಿಗದಿತ ಕಾಲಮಿತಿಯಲ್ಲಿ ನಿಯಂತ್ರಿಸಲು ಸೂಚಿಸಿ. ಕ್ರಮ ವಹಿಸದಿದ್ದರೆ ನಿಯಮಾನುಸಾರ ಮೊಕದ್ದಮೆ ದಾಖಲಿಸಿ’ ಎಂದೂ ಸೂಚನೆ ನೀಡಿದರು.

ಡಿಸಿಎಂ ಅಧ್ಯಕ್ಷತೆಯಲ್ಲಿ ಸಭೆ: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಶೀಘ್ರವೇ ಅವರ ಅಧ್ಯಕ್ಷತೆಯಲ್ಲೇ ಬೆಂಗಳೂರು ನಗರದ ಎಲ್ಲ ಜನಪ್ರತಿನಿಧಿಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಖಂಡ್ರೆ ತಿಳಿಸಿದರು.

ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಭಾಗವಹಿಸಿದ್ದರು.

ಏಕ ಬಳಕೆ ಪ್ಲಾಸ್ಟಿಕ್: ಜನ ಜಾಗೃತಿಯೊಂದೇ ಮಾರ್ಗ

ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಬೆಂಗಳೂರಿನಲ್ಲಿ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಜಾಗೃತ ದಳ ರಚಿಸಿ ಕ್ರಮ ಕೈಗೊಳ್ಳಲು ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು. ಬೆಂಗಳೂರು ಸೇರಿ ರಾಜ್ಯದಲ್ಲಿ ಎಷ್ಟು ತ್ಯಾಜ್ಯ ಶುದ್ಧೀಕರಣ ಘಟಕಗಳವೆ? ಅವುಗಳ ಪೈಕಿ ಎಷ್ಟು ಕಾರ್ಯ ನಿರ್ವಹಿಸುತ್ತಿವೆ? ಅವುಗಳ ಸ್ಥಾಪಿತ ಸಾಮರ್ಥ್ಯ ಎಷ್ಟು? ಮತ್ತು ಪ್ರಸ್ತುತ ಎಷ್ಟು ಎಂಎಲ್‌ಡಿ ದ್ರವ ತ್ಯಾಜ್ಯ ಸಂಸ್ಕರಣೆ ಆಗುತ್ತಿದೆ?  ಎಷ್ಟು ಎಂಎಲ್‌ಡಿ ನೀರು ಸಂಸ್ಕರಣೆ ಆಗದೆ ಜಲ ಮೂಲ ಸೇರುತ್ತಿದೆ? ಎಂಬ ಬಗ್ಗೆ ಪರಿಸರ ಇಲಾಖೆಯಿಂದ ಖುದ್ದು ಪರಿಶೀಲನೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆಯೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.