ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಅರಣ್ಯ ಜಮೀನು ಬಳಕೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾದರೆ ಎತ್ತಿನಹೊಳೆ ಯೋಜನೆಯಿಂದ ತುಮಕೂರು ಜಿಲ್ಲೆಗೆ ನೀರು ಹರಿಸಲಾಗುವುದು’ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಜೆಡಿಎಸ್‌ನ ಕೆ. ವೆಂಕಟ ಶಿವಾರೆಡ್ಡಿ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಎತ್ತಿನಹೊಳೆ ಯೋಜನೆಗೆ ಬಳಕೆಯಾಗುವ ಅರಣ್ಯ ಜಮೀನಿಗೆ ಪರ್ಯಾಯ ಜಮೀನುಗಳನ್ನು ಈಗಾಗಲೇ ಬಿಟ್ಟುಕೊಡಲಾಗಿದೆ. ಆದರೂ, ಅರಣ್ಯ ಇಲಾಖೆಯಿಂದ ಕೆಲವೆಡೆ ಸಮಸ್ಯೆ ಇದೆ. ಅದನ್ನು ಪರಿಹರಿಸಲು ಇದೇ 7ರಂದು ಸಭೆ ನಿಗದಿಯಾಗಿದೆ. ಅಲ್ಲಿ ಎಲ್ಲವೂ ಪರಿಹಾರವಾಗುವ ನಿರೀಕ್ಷೆ ಇದೆ’ ಎಂದರು.
ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ಅಡಿ ನೀರು ಲಭ್ಯವಾಗುವ ಅಂದಾಜು ಇದೆ. ಅದರಲ್ಲಿ 14 ಟಿಎಂಸಿ ಅಡಿಗಳನ್ನು ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿಯೇ ಬಳಸಬೇಕು. ಈಗಾಗಲೇ ನೀಡಿರುವ ವಾಗ್ದಾನದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗುವುದು. ಮಿಕ್ಕ ನೀರನ್ನು ಮಾತ್ರವೇ ಕೆರೆ ತುಂಬಿಸುವ ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
2027ರ ಮಾರ್ಚ್ ಅಂತ್ಯಕ್ಕೆ ಎತ್ತಿನಹೊಳೆ ಯೋಜನೆಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಇದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, 2025–26ರಲ್ಲೇ ಕೋಲಾರ ಮತ್ತು ಶ್ರೀನಿವಾಸಪುರ ಫೀಡರ್ ಕೊಳವೆ ಮಾರ್ಗಗಳ ಕಾಮಗಾರಿ ಆರಂಭಿಸಲಾಗುವು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.