ADVERTISEMENT

ಶೀಘ್ರ 12 ವಿದ್ಯುತ್‌ ಚಾರ್ಜಿಂಗ್‌ ಕೇಂದ್ರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:57 IST
Last Updated 14 ಆಗಸ್ಟ್ 2019, 19:57 IST
   

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ (ಬೆಸ್ಕಾಂ) 12 ವಿದ್ಯುತ್‌ ವಾಹನ ಚಾರ್ಜಿಂಗ್‌ ಕೇಂದ್ರಗಳು ಈ ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ. ವಿದ್ಯುತ್‌ ವಾಹನ ಬಳಕೆದಾರರು ಇನ್ನು ಮುಂದೆ ಸುಲಭದಲ್ಲಿ ವಾಹನಗಳಿಗೆ ಚಾರ್ಜ್‌ ಮಾಡಿಸಿಕೊಳ್ಳಬಹುದು.

ಚಾರ್ಜಿಂಗ್‌ ಕೇಂದ್ರದ ಉಪಕರಣಗಳು ಬಂದಿದ್ದು, ಕೆಲವೇ ದಿನಗಳಲ್ಲಿ ಅವುಗಳನ್ನು ಅಳವಡಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

‘ತ್ವರಿತವಾಗಿ ಚಾರ್ಜ್‌ ಮಾಡುವ 12 ಕೇಂದ್ರಗಳು ಈ ತಿಂಗಳ ಅಂತ್ಯದಲ್ಲಿ ಕಾರ್ಯಾರಂಭ ಮಾಡಲಿವೆ. ಉದಾಹರಣೆಗೆ, ಈ ಕೇಂದ್ರದಲ್ಲಿ 120 ಕಿ.ಮೀ. ಮೈಲೇಜ್‌ಗೆ 90 ನಿಮಿಷ ಚಾರ್ಜ್‌ ಮಾಡಬೇಕಾಗುತ್ತದೆ. ನಿಧಾನಗತಿಯಲ್ಲಿ ಚಾರ್ಜ್‌ ಆಗಲಿರುವ 100 ಕೇಂದ್ರಗಳು ಸೆಪ್ಟೆಂಬರ್‌ ಅಂತ್ಯದೊಳಗೆ ಶುರುವಾಗಲಿವೆ’ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಪ್ರತಿ ಯೂನಿಟ್‌ಗೆ ₹5 ದರ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿಗದಿ ಮಾಡಿದೆ. ಕೇಂದ್ರವನ್ನು ನಿರ್ವಹಣೆ ಮಾಡುವವರು ಈ ಮೊತ್ತವನ್ನು ಬೆಸ್ಕಾಂಗೆ ಪಾವತಿ ಮಾಡಬೇಕು. ಗ್ರಾಹಕರು ಯೂನಿಟ್‌ಗೆ ಎಷ್ಟು ಪಾವತಿ ಮಾಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ದರದ ಪ್ರಸ್ತಾವವನ್ನು ಉನ್ನತಾಧಿಕಾರ ಸಮಿತಿಗೆ ಕಳುಹಿಸಲಾಗಿದೆ’ ಎಂದು ವಿವರಿಸಿದರು.

ಹೊಸ ಚಾರ್ಜಿಂಗ್‌ ಕೇಂದ್ರಗಳ ಕಾರ್ಯಶೈಲಿಯನ್ನು ಗಮನಿಸಿ ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ಬಗ್ಗೆ ಕಂಪನಿ ತೀರ್ಮಾನ ಕೈಗೊಳ್ಳಲಿದೆ.

ನಗರದಲ್ಲಿ 9 ಸಾವಿರ ವಿದ್ಯುತ್‌ ಚಾಲಿತ ವಾಹನಗಳು ಇವೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲೂ ಈ ಕೇಂದ್ರಗಳ ಸ್ಥಾಪನೆ ಮಾಡಲು ಇವಿ ಚಾರ್ಜಿಂಗ್‌ ಮೂಲಸೌಕರ್ಯ ಒದಗಿಸುವ ಸಮಿತಿ ‍ಪ್ರಸ್ತಾವ ಸಲ್ಲಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 25 ಕಿ.ಮೀ.ಗೊಂದು ಕೇಂದ್ರಗಳು ಇರಬೇಕು ಎಂದು ಇಂಧನ ಸಚಿವಾಲಯದ (ಮರುಬಳಕೆ) ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದರ ಆಧಾರದಲ್ಲಿ ರಾಜ್ಯ ಸರ್ಕಾರ 2017ರಲ್ಲಿ ಎಲೆಕ್ಟ್ರಿಕ್‌ ವಾಹನಗಳ ನೀತಿಯನ್ನು ಪ‍್ರಕಟಿಸಿದೆ.

ಎಲ್ಲೆಲ್ಲಿ ಸ್ಟೇಷನ್‌?

lಬೆಸ್ಕಾಂ ಕಾರ್ಪೊರೇಟ್‌ ಕಚೇರಿ, ಕೆ.ಆರ್.ವೃತ್ತ

lಕತ್ರಿಗುಪ್ಪೆ (ಇಂದಿರಾ ಕ್ಯಾಂಟೀನ್‌ ಹತ್ತಿರ)

lಮುರುಗೇಶಪಾಳ್ಯ (ಎಚ್‌ಎಎಲ್‌ ರಸ್ತೆ)

lದೊಮ್ಮಲೂರು ಮೇಲ್ಸೇತುವೆ

lಮಹದೇವಪುರ

lಬಾಣಸವಾಡಿ ಪೊಲೀಸ್‌ ಠಾಣೆ ಹತ್ತಿರ

lಯಲಹಂಕ ‍ಪೊಲೀಸ್ ಠಾಣೆ ಹತ್ತಿರ

lಮತ್ತಿಕೆರೆ ಮೇಲ್ಸೇತುವೆ ಹತ್ತಿರ

lಪೀಣ್ಯ

lಬ್ಯಾಟರಾಯನಪುರ (ಮೈಸೂರು ರಸ್ತೆ)

lಬಿಟಿಎಂ ಬಡಾವಣೆ

lಎಚ್ಎಸ್‌ಆರ್‌ ಬಡಾವಣೆ ಎರಡನೇ ಸೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.