ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಹರ್ಷವರ್ಧನಿ ರನ್ಯಾ (ರನ್ಯಾ ರಾವ್) ಹಾಗೂ ತರುಣ್ ಕೊಂಡೂರು ರಾಜ್ ಅವರಿಗೆ ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
₹2 ಲಕ್ಷ ಮೊತ್ತದ ಬಾಂಡ್, ಎರಡು ಶ್ಯೂರಿಟಿಗಳನ್ನು ಒಳಗೊಂಡ ಷರತ್ತು ವಿಧಿಸಿ, ಜಾಮೀನು ಮಂಜೂರು ಮಾಡಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾವ್ ಅವರ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ (ಸಿಇಐಬಿ) ‘ಕಾಫಿಪೋಸಾ’ ಕಾಯ್ದೆ ಅಡಿ ಬಂಧನದ ಆದೇಶ ಹೊರಡಿಸಿರುವ ಕಾರಣಕ್ಕೆ ಸದ್ಯಕ್ಕೆ ಬಿಡುಗಡೆಗೆ ಅವಕಾಶ ಇಲ್ಲ. ಈ ಆದೇಶವನ್ನು ಪ್ರಶ್ನಿಸಿ ರನ್ಯಾ ರಾವ್ ಅವರ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 3ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.
ರನ್ಯಾ ರಾವ್ ಹಾಗೂ ತರುಣ್ ಅವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ರೆವಿನ್ಯೂ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ನಿಗದಿತ ಅವಧಿಯ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣಕ್ಕೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ದುಬೈನಿಂದ 14.2 ಕೆ.ಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡಿಕೊಂಡು ಬಂದಿದ್ದ ಆರೋಪದ ಮೇರೆಗೆ ಮಾರ್ಚ್ 3ರಂದು ಡಿಆರ್‌ಐ ಅಧಿಕಾರಿಗಳು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ಚಿನ್ನ ಸಾಗಣೆ ಹಾಗೂ ಮಾರಾಟಕ್ಕೆ ನೆರವು ನೀಡಿದ್ದ ಆರೋಪದ ಮೇರೆಗೆ ರಾಜು ಹಾಗೂ ಸಾಹಿಲ್ ಜೈನ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಮೂವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್ ಅಡಿಯಲ್ಲಿ ರನ್ಯಾ ವಿರುದ್ಧ ಏಪ್ರಿಲ್ 22ರಂದು ಬಂಧನದ ಆದೇಶ ಹೊರಡಿಸಲಾಗಿದೆ. ಕಾಫಿಪೋಸಾ ಪ್ರಕರಣದಲ್ಲಿ ಬಂಧನವಾದರೆ ಜಾಮೀನಿನ ಮೇಲೆ ಬಿಡುಗಡೆ ಸಾಧ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.