ADVERTISEMENT

ತತ್ವ, ಸಿದ್ಧಾಂತ ಭಿನ್ನವಾದರೂ ಜನರ ಏಳಿಗೆಯೇ ಗುರಿಯಾಗಿರಬೇಕು: ಕೆ.ಕೆ. ಶೈಲಜಾ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 16:18 IST
Last Updated 1 ಡಿಸೆಂಬರ್ 2024, 16:18 IST
ಕೆ.ಕೆ. ಶೈಲಜಾ
ಕೆ.ಕೆ. ಶೈಲಜಾ   

ಬೆಂಗಳೂರು: ತತ್ವ, ಸಿದ್ಧಾಂತಗಳು ಭಿನ್ನವಾದರೂ ಗುರಿ ಮಾತ್ರ ಒಂದೇ ಇರಬೇಕು. ಶೋಷಣೆ, ಹತ್ಯೆಗಳಿಲ್ಲದ ಸುರಕ್ಷಿತ ಸಮಾಜ ನಿರ್ಮಿಸುವುದು, ಜಾತಿ, ಧರ್ಮ, ಲಿಂಗ, ಬಣ್ಣ, ಭಾಷೆಗಳ ಭೇದವಿಲ್ಲದೇ ಎಲ್ಲರಿಗೂ ನೆಮ್ಮದಿಯ ಬದುಕು ನೀಡುವುದು ಉದ್ದೇಶವಾಗಬೇಕು ಎಂದು ಕೇರಳದ ಶಾಸಕಿ ಕೆ.ಕೆ. ಶೈಲಜಾ (ಶೈಲಜಾ ಟೀಚರ್‌) ಆಶಿಸಿದರು.

ಕ್ರಿಯಾಮಾಧ್ಯಮವು ಶನಿವಾರ ಹಮ್ಮಿಕೊಂಡಿದ್ದ ‘ಕಾಮ್ರೇಡ್ ಆಗಿ ನನ್ನ ಬದುಕು’ ಕೃತಿ ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಉತ್ತಮ ಆಹಾರ, ಉತ್ತಮ ಶಿಕ್ಷಣ, ಉದ್ಯೋಗ, ಉತ್ತಮ ವೇತನ, ಮೇಲು–ಕೀಳು ಭಾವವಿಲ್ಲದ ಸಂಘಟಿತ ಕೆಲಸ ಇದ್ದರೆ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ. ಕೇರಳದಲ್ಲಿ ನಿಫಾ ಆನಂತರ ಕೋವಿಡ್‌ ಬಂದಾಗ ಯಾವುದನ್ನೂ ಮುಚ್ಚಿಡದೇ ಸಮರೋಪಾದಿಯಾಗಿ ಎಲ್ಲರೂ ಕೆಲಸ ಮಾಡಿದ್ದರಿಂದ ಯಶಸ್ಸು ಕಾಣಲು ಸಾಧ್ಯವಾಯಿತು. ಸಂಕಷ್ಟವನ್ನು ಹೇಗೆ ಎದುರಿಸಿದ್ದೀರಿ ಎಂದು ಆಗ ಬಹಳ ಮಂದಿ ಕೇಳಿದ್ದರು. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ಕೈಗೊಂಡು, ಸರಿಯಾದ ಕಾರ್ಯಕ್ರಮ ಹಮ್ಮಿಕೊಂಡು ಸರಿದಾರಿಯಲ್ಲಿ ಕೆಲಸ ಮಾಡಿದ್ದರಿಂದ ಸಾಧ್ಯವಾಯಿತು ಎಂದು ಆಗ ಉತ್ತರಿಸಿದ್ದೆ’ ಎಂದು ಹೇಳಿದರು.

ADVERTISEMENT

‘ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂದು ಕೋವಿಡ್‌ ಸಮಯದಲ್ಲಿ ಇಲ್ಲಿನ ನಾಯಕರೊಬ್ಬರು ಹೇಳಿಕೆ ನೀಡುವ ಹೊತ್ತಿಗೆ ಕೇರಳದಲ್ಲಿ ಕೋವಿಡ್‌ ನಿಯಂತ್ರಿಸಲು ಬೇಕಾದ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಾಗಿತ್ತು’ ಎಂದು ನೆನಪು ಮಾಡಿಕೊಂಡರು.

ಪಾಶ್ಚಾತ್ಯ ದೇಶಗಳಲ್ಲಿದ್ದ ಗುಲಾಮ ಪದ್ಧತಿಗೆ ಕಡಿಮೆ ಇಲ್ಲದಂಥ ಶೋಷಣೆ ಕೇರಳದಲ್ಲಿಯೂ ಇತ್ತು. ಹೆಣ್ಣು ಮತ್ತು ಮಣ್ಣು ಎಂಬುದು ಉಳ್ಳವರ ಖಾಸಗಿ ಸೊತ್ತಾಗಿತ್ತು. ಕೆಳವರ್ಗದ ಹೆಣ್ಣುಮಗಳು ಮದುವೆಯ ಹಿಂದಿನ ದಿನ ಭೂಮಾಲೀಕನೊಂದಿಗೆ ಮಲಗಿ ಬರಬೇಕಿತ್ತು. ಬಡಜನರು ಇದನ್ನು ದೇವರ ನಿರ್ಧಾರ ಎಂದು ತಿಳಿದಿದ್ದರು. ಹೋರಾಟಗಳು ಇಂಥ ಪರಿಸ್ಥಿತಿಯನ್ನು ಬದಲಾಯಿಸಿದವು. ಆದರೂ ಇಂದಿಗೂ ಗುರುವಾಯೂರಿನಂಥ ದೇವಸ್ಥಾನಗಳಿಗೆ ಎಲ್ಲರಿಗೂ ಪ್ರವೇಶವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

‘ಕಾಮ್ರೇಡ್ ಆಗಿ ನನ್ನ ಬದುಕು ಎಂಬುದು ಆತ್ಮಕಥೆ ಎನ್ನುವುದಕ್ಕಿಂತ ನನ್ನ ಬಾಲ್ಯದ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಮ್ಯುನಿಸ್ಟ್‌ ಆದಾಗಿನ ಕೆಲವು ನೆನಪುಗಳು‘ ಎಂದರು.

ಲೇಖಕಿ ವಸುಂಧರಾ ಭೂಪತಿ ಕೃತಿ ಬಿಡುಗಡೆ ಮಾಡಿ ಮಾತನಾಡಿ, ‘ಇದು ಶೈಲಜಾ ಟೀಚರ್‌ ಅವರ ಆತ್ಮಕಥನವೂ ಹೌದು. ಅದರ ಜೊತೆಗೆ ಕೇರಳದ ಸಮಾಜೋ ರಾಜಕೀಯ ಕಥನವೂ ಹೌದು. ಕೇರಳದ ಸಾಮಾಜಿಕ ಆರೋಗ್ಯ ವ್ಯವಸ್ಥೆ, ಸಾಮಾಜಿಕ ಬೆಳವಣಿಗೆ, ಕಮ್ಯುನಿಸ್ಟ್‌ ಬೆಳವಣಿಗೆಗಳನ್ನು ಈ ಕೃತಿಯು ಬಿಚ್ಚಿಡುತ್ತದೆ. ಕನ್ನಡಕ್ಕೆ ಅನುವಾದರೆ ಸಾಕಾಗದು, ಎಲ್ಲ ಭಾಷೆಗಳಿಗೆ ಅನುವಾದಗೊಳ್ಳಬೇಕು’ ಎಂದು ಹೇಳಿದರು.

ಕೃತಿಯ ಅನುವಾದಕಿ ಎಚ್‌.ಎಸ್‌. ಅನುಪಮಾ ಮಾತನಾಡಿ, ‘ಪುರುಷರು ಆತ್ಮಕಥೆ ಬರೆದಾಗ ಅದರಲ್ಲಿ ಅವರ ಬದುಕು ಮತ್ತು ಸಾಧನೆಗೇ ಮೊದಲ ಆದ್ಯತೆ. ಕುಟುಂಬಕ್ಕೆ ಎರಡನೇ ಆದ್ಯತೆ ಇರುತ್ತದೆ. ಮಹಿಳೆಯರು ಬರೆದಾಗ ಕುಟುಂಬ ಮತ್ತು ಜೀವನ ಎಲ್ಲವೂ ಒಳಗೊಂಡಿರುತ್ತದೆ. ಶೈಲಜಾ ಟೀಚರ್‌ ಅವರ ಕಥನವೂ ಅವರ ಅಜ್ಜಿಯಿಂದ ಸ್ಪೂರ್ತಿ ಪಡೆದಲ್ಲಿಂದ ಹೋರಾಟದವರೆಗೆ ಎಲ್ಲ ವಿವರಗಳಿವೆ. ಇದನ್ನು ಕಮ್ಯುನಿಸ್ಟ್‌ ಪಕ್ಷವೇ ಎಲ್ಲ ಭಾಷೆಗಳಿಗೆ ಅನುವಾದಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಶಿಸಿದರು.

ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಅನಿಲ್ ಕುಮಾರ್‌ ಎ., ಪ್ರಸನ್ನ ಸಾಲಿಗ್ರಾಮ ವಿಚಾರ ಮಂಡಿಸಿದರು. ಕ್ರಿಯಾಮಾಧ್ಯಮದ ಕೆ.ಎಸ್‌. ವಿಮಲಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.