ADVERTISEMENT

ಪರಿಸರ ಮಾಲಿನ್ಯಕ್ಕೆ ಎಲ್ಲರೂ ಹೊಣೆ: ಪ್ರಕಾಶ್ ಬೆಳವಾಡಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 20:44 IST
Last Updated 17 ಜೂನ್ 2021, 20:44 IST

ಬೆಂಗಳೂರು: ‘ಪರಿಸರ ಮಾಲಿನ್ಯಕ್ಕೆ ನಾವು ಸರ್ಕಾರಗಳನ್ನು ಮತ್ತು ಕೈಗಾರಿಕೆಗಳನ್ನು ದೂಷಿಸುತ್ತೇವೆ. ಆದರೆ, ಪರೋಕ್ಷವಾಗಿ ನಾವು ಆ ಎಲ್ಲ ಕೈಗಾರಿಕೆಗಳು ಉತ್ಪಾದಿಸುವ ಉತ್ಪನ್ನಗಳ ಗ್ರಾಹಕರು ನಾವೇ ಆಗಿರುತ್ತೇವೆ. ಪರಿಸರದ ಮೇಲಿನ ಹಾನಿಗೆ ನಾವೆಲ್ಲರೂ ಕಾರಣ’ ಎಂದು ನಟ ಪ್ರಕಾಶ್‌ ಬೆಳವಾಡಿ ಹೇಳಿದರು.

ರೋಟರಿ ಕ್ಲಬ್‌ ಮತ್ತು ಕ್ರಾನಿಕ್ ಫೌಂಡೇಷನ್‌ನ ಪ್ರೈಡ್ ಎನರ್ಜಿ ಎನ್ವಿರಾನ್ಮೆಂಟ್ ರಿಸೋರ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ವತಿಯಿಂದ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವೆಬಿನಾರ್‌ನಲ್ಲಿ ಮಾತನಾಡಿದರು.

ರೋಟರಿ ಕ್ಲಬ್‌ನ ರಮೇಶ್‌ ಶಿವಣ್ಣ, ’ಪರಿಸರ ವ್ಯವಸ್ಥೆಯ ಪುನರ್‌ ಸ್ಥಾಪನೆ ಎಂಬುದು ಈ ಬಾರಿಯ ಪರಿಸರದ ದಿನದ ಘೋಷವಾಕ್ಯ. ನಾವು ಕೂಡ ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಆದಷ್ಟು ತಪ್ಪಿಸಬೇಕು. ಆರ್ಥಿಕ ಚಟುವಟಿಕೆಯೂ ಪರಿಸರ ಸಂರಕ್ಷಣೆಗೆ ಪೂರಕವಾಗಿರಬೇಕು’ ಎಂದರು.

ADVERTISEMENT

ರೋಟರಿ ಕ್ಲಬ್‌ನ ಶೇಖರ್ ಮೆಹ್ತಾ, ’ರೋಟರಿ ಕ್ಲಬ್‌ ವತಿಯಿಂದ ಈ ವರ್ಷದಲ್ಲಿ ದೇಶದಾದ್ಯಂತ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಿದ್ದೇವೆ. ಐದು ವರ್ಷಗಳಲ್ಲಿ ಐದು ಸಾವಿರ ಹಳ್ಳಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶವಿದೆ’ ಎಂದರು.

ರಾಜ್ಯಸರ್ಕಾರದ ಕೆಆರ್‌ಇಡಿಎಲ್‌, ರೋಟರಿ ಗ್ರೀನ್ ಪಾರ್ಕ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.