
ವಿಧಾನಸಭೆ: ನೇಮಕಾತಿ ಪರೀಕ್ಷೆಗಳ ಅಕ್ರಮಗಳಲ್ಲಿ ಭಾಗಿಯಾದವರಿಗೆ 12 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಕೋಟಿವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಮಸೂದೆ–2023’ ಅನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.
ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಸೂದೆಯನ್ನು ಸದನದಲ್ಲಿ ಮಂಡಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ಸಂಗ್ರಹ, ವಿತರಣೆ, ಡಿಜಿಟಲ್ ಸಾಧನಗಳ ಮೂಲಕ ಉತ್ತರ ಪಡೆಯುವುದು ಮತ್ತು ಪೂರೈಸುವುದು, ಒಎಂಆರ್ ಶೀಟ್‌ಗಳನ್ನು ತಿದ್ದುವುದು ಸೇರಿದಂತೆ ಎಲ್ಲ ಬಗೆಯ ಪರೀಕ್ಷಾ ಅಕ್ರಮಗಳನ್ನು ಮಸೂದೆಯ ವ್ಯಾಪ್ತಿಗೆ ತರಲಾಗಿದೆ.
ಆನ್‌ಲೈನ್ ಗೇಮಿಂಗ್‌ಗೆ ಜಿಎಸ್‌ಟಿಗೂ ಮಸೂದೆ: ಬೆಟ್ಟಿಂಗ್, ಕ್ಯಾಸಿನೊ, ಜೂಜು, ಕುದುರೆ ರೇಸಿಂಗ್, ಲಾಟರಿ, ಆನ್‌ಲೈನ್ ಮನಿ ಗೇಮಿಂಗ್‌ಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರುವ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ–2023’ ಅನ್ನು ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಮಂಡಿಸಿದರು.
ಎಲ್ಲ ಬಗೆಯ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳಿಗೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್‌ಟಿ ಕೌನ್ಸಿಲ್) ಆಗಸ್ಟ್ 2ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು. ಅಕ್ಟೋಬರ್ 1ರಿಂದಲೇ ಆನ್‌ಲೈನ್ ಗೇಮಿಂಗ್ ಮೇಲೆ ಜಿಎಸ್‌ಟಿ ಜಾರಿಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ವಿಧಾನಮಂಡಲದಲ್ಲಿ ಆರು ತಿಂಗಳೊಳಗೆ ಮಸೂದೆ ಅಂಗೀಕರಿಸಬೇಕಿತ್ತು.
ಮಸೂದೆಯು ಕ್ಯಾಸಿನೊ, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳನ್ನು ಕಾನೂನುಬದ್ಧಗೊಳಿಸುವುದಿಲ್ಲ ಎಂಬ ಉಲ್ಲೇಖ ಮಸೂದೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.