ADVERTISEMENT

ಹಣ ಸುಲಿಗೆ ಪ್ರಕರಣ: ಮೂವರು ಕಾನ್‌ಸ್ಟೆಬಲ್‌, ಯುಟ್ಯೂಬರ್‌ ಬಂಧನ

ಬಾಗಲೂರು ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 21:38 IST
Last Updated 9 ಮೇ 2025, 21:38 IST
<div class="paragraphs"><p>ಬಂಧನ </p></div>

ಬಂಧನ

   

ಬೆಂಗಳೂರು: ಹಣ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್‌ ಠಾಣೆಯ ಮೂವರು ಕಾನ್‌ಸ್ಟೆಬಲ್‌ಗಳು ಹಾಗೂ ಒಬ್ಬ ಯುಟ್ಯೂಬರ್‌ನನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಜಾಲ ಪೊಲೀಸ್‌ ಠಾಣೆ ಹೆಡ್ ಕಾನ್‌ಸ್ಟೆಬಲ್‌ ವಿಜಯ್ ಕುಮಾರ್, ಕಾನ್‌ಸ್ಟೆಬಲ್‌ಗಳಾದ ಸಂತೋಷ ಹಾಗೂ ಮಂಜುನಾಥ ಹಾಗೂ ಟಾರ್ಗೆಟ್‌ ನ್ಯೂಸ್‌ ಯುಟ್ಯೂಬ್‌ ವಾಹಿನಿಯ ಪ್ರವೀಣ್‌ ಬಂಧಿತರು.

ADVERTISEMENT

ಇತರೆ ಆರೋಪಿಗಳಾದ ಪುನೀತ್‌, ರಕ್ಷಿತ್‌, ಚಂದನ್‌ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಸಹಕಾರ ನಗರದ ‘ಎ’ ಬ್ಲಾಕ್‌ನ ನಿವಾಸಿ ನಾಗರಾಜ್‌ ಬಂಡಾರು ಎಂಬುವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ದೂರುದಾರ ನಾಗರಾಜ್ ಅವರು ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್‌ ಕೆಲಸ ಮಾಡುತ್ತಿದ್ದಾರೆ. ಹನುಮಂತರಾಯಪ್ಪ ಅವರ ಮೂಲಕ ನಾಗರಾಜ್ ಅವರಿಗೆ ರಕ್ಷಿತ್‌ ಎಂಬಾತನ ಪರಿಚಯವಾಗಿತ್ತು. ಅದಾನಿ ಗ್ರೀನ್‌ ಎನರ್ಜಿ ಸಂಸ್ಥೆಗೆ ರಕ್ಷಿತ್‌ ಜಿಎಸ್‌ಟಿ ಬಿಲ್‌ ಕೇಳಿದ್ದ. ಅಲ್ಲದೇ ಪುನೀತ್‌ ಎಂಬಾತನಿಂದ ಸಂಸ್ಥೆಗೆ ಕ್ರಿಪ್ಟೊ ಕರೆನ್ಸಿ (ಯುಎಸ್‌ಡಿಟಿ) ಖರೀದಿಸಲು ₹50 ಲಕ್ಷ ಹಣ ಬೇಕಾಗಿದ್ದು, ಹಣ ಹೊಂದಿಸುವಂತೆ ರಕ್ಷಿತ್‌ ಕೇಳಿಕೊಂಡಿದ್ದ. ಆ ಹಣಕ್ಕೆ ಟ್ರಾನ್ಸಿಷನ್‌ ಹಣ ಸೇರಿಸಿ ₹65 ಲಕ್ಷವನ್ನು ಪುನೀತ್‌ ಬ್ಯಾಂಕ್‌ ಖಾತೆಗೆ ಪಾವತಿಸುವಂತೆ ತಿಳಿಸಿ ಜಿಎಸ್‌ಟಿ ಬಿಲ್‌ ನೀಡುವಂತೆ ಕೇಳಿಕೊಂಡಿದ್ದ. ಗೋವಿಂದಪ್ಪ ₹40.40 ಲಕ್ಷ ಹೊಂದಿಸಿದ್ದರು. ನಾಗರಾಜ್‌ ₹9.60 ಲಕ್ಷ ಹೊಂದಿಸಿದ್ದರು. ಆ ಹಣವನ್ನು ತೆಗೆದುಕೊಂಡು ನಾಗರಾಜ್‌ ಹಾಗೂ ಗೋವಿಂದಪ್ಪ ಅವರು ರಕ್ಷಿತ್‌, ಚಂದನ್‌ ಹಾಗೂ ಪುನೀತ್‌ ಭೇಟಿ ಮಾಡಲು ತೆರಳಿದ್ದರು. ಅಲ್ಲಿಗೆ ಚಿಕ್ಕಜಾಲ ಪೊಲೀಸರು ಬಂದು,  ‘ಇದು ಅಕ್ರಮ ಹಣ. ₹6 ಲಕ್ಷ ಕೊಟ್ಟರೆ ಬಿಡುತ್ತೇವೆ’ ಎಂದು ಹೇಳಿ ಹಣ ಪಡೆದುಕೊಂಡು ಹೋಗಿದ್ದರು’ ಎಂದು ಮೂಲಗಳು ಹೇಳಿವೆ.

‘ರಕ್ಷಿತ್‌ ಹಾಗೂ ಪುನೀತ್‌ಗೆ ಕರೆ ಮಾಹಿತಿ ನೀಡಿದಾಗ ಅವರು ಸ್ಥಳಕ್ಕೆ ಬರಲು ಒಪ್ಪಿರಲಿಲ್ಲ. ಮರುದಿನ ಬಂದಿದ್ದ ಆರೋಪಿ ಪುನೀತ್‌ ದೂರುದಾರ ನಾಗರಾಜ್‌ ಅವರ ಬಳಿಯಿದ್ದ ಹಣ ಹಾಗೂ ಚಿನ್ನಾಭರಣ ಕಸಿದುಕೊಂಡು ಪರಾರಿ ಆಗಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಹಣ ಸುಲಿಗೆ ಮಾಡುವ ಉದ್ದೇಶದಿಂದಲೇ ಮೂವರು ಪೊಲೀಸರು, ಯುಟ್ಯೂಬರ್ ಜತೆಗೆ ಸೇರಿಕೊಂಡು ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಪೊಲೀಸರು ಹಾಗೂ ಇತರೆ ಆರೋಪಿಗಳ ಪಾತ್ರ ಗೊತ್ತಾಗಲಿದೆ. ಹಣ ದ್ವಿಗುಣ ಮಾಡುವ ದಂಧೆ ನಡೆಸಲಾಗುತ್ತಿತ್ತೇ ಎಂಬುದರ ಕುರಿತೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.