ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ, ಬೆದರಿಸಿ ಚಿನ್ನಾಭರಣ, ಮೊಬೈಲ್, ನಗದು ಕಸಿದು ಪರಾರಿಯಾಗುತ್ತಿದ್ದ ಐವರು ಆರೋಪಿಗಳನ್ನು ಈಶಾನ್ಯ ವಿಭಾಗದ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ಧಾರೆ.
ಶಿವಾಜಿನಗರದ ಬಂಬೂ ಬಜಾರ್‌ನ ಮೊಹಮ್ಮದ್ ಅರ್ಬಾಜ್, ಥಣಿಸಂದ್ರದ ಅಮರಜ್ಯೋತಿಯ ಲೇಔಟ್‌ನ ಸೈಯದ್ ಅರ್ಬಾಝ್, ಟೆಲಿಕಾಂ ಲೇಔಟ್‌ನ ಸರಾಯಿ ಪಾಳ್ಯದ ನಿವಾಸಿ ಗೌಸ್ ಶರೀಫ್, ಕೆ.ಜಿ.ಹಳ್ಳಿಯ ಮುಜಾಮಿಲ್ ರಹೀಮಾನ್ ಹಾಗೂ ಎಜಾಜ್ ಅಹಮ್ಮದ್ ಬಂಧಿತ ಆರೋಪಿಗಳು.
ಬಂಧಿತರಿಂದ ₹2.50 ಲಕ್ಷ ಮೌಲ್ಯದ ಬೈಕ್, ನಾಲ್ಕು ಮೊಬೈಲ್, ಒಂದು ಚಿನ್ನದ ಉಂಗುರ ಹಾಗೂ ಕರಿಮಣಿಯುಳ್ಳ ಚಿನ್ನದ ಸರವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಆರೋಪಿಗಳು ಕಳವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ಬಿಡುಗಡೆಯಾದ ಮೇಲೆ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದರು. ಕಣ್ಣೂರು ವೃತ್ತದಿಂದ ಬೆಳ್ಳಳ್ಳಿ ಗ್ರಾಮದ ರಸ್ತೆಯಲ್ಲಿ ಬೈಕ್ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಸುಲಿಗೆ ಮಾಡಿದ ಚಿನ್ನಾಭರಣ ಮಾರಾಟ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.