ADVERTISEMENT

ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಸೋಗಿನಲ್ಲಿ ₹24 ಲಕ್ಷ ಸುಲಿಗೆ: 12 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 14:28 IST
Last Updated 23 ಫೆಬ್ರುವರಿ 2026, 14:28 IST
<div class="paragraphs"><p>ಕೃಷ್ಣ ಕುಮಾರ್&nbsp;</p></div>

ಕೃಷ್ಣ ಕುಮಾರ್ 

   

ಬೆಂಗಳೂರು: ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಎಂಬುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ ₹24 ಲಕ್ಷ ಸುಲಿಗೆ ಮಾಡಿದ್ದ 12 ಆರೋಪಿಗಳನ್ನು ದೇವನಹಳ್ಳಿ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಖಾಸಗಿ ಬ್ಯಾಂಕ್ ಉದ್ಯೋಗಿ ಸಿ.ಕೃಷ್ಣಕುಮಾರ್ ರೆಡ್ಡಿ (50), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯ ನಿವಾಸಿ, ರಿಯಲ್ ಎಸ್ಟೇಟ್‌ ಏಜೆಂಟ್ ಎಸ್‌.ಅಹಮ್ಮದ್ ಷರೀಪ್‌ (48), ಬಾಗೇಪಲ್ಲಿಯ ಹೌಸಿಂಗ್‌ ಬೋರ್ಡ್ ಕಾಲೊನಿಯ ನಿವಾಸಿ, ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಣುಗೋಪಾಲ(49), ಆನೇಕಲ್‌ ತಾಲ್ಲೂಕಿನ ಮುನಿನಂಜಪ್ಪನ ದೊಡ್ಡಿಯ ನಿವಾಸಿ, ಸಂಪಂಗಿರಾಮ ಅಲಿಯಾಸ್ ಸುರೇಶ್ ಕುಮಾರ್ (47), ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ‌ ಪಟ್ಟಣದ ನಾರಾಯಣಸ್ವಾಮಿ (52), ಚಿಂತಾಮಣಿ ತಾಲ್ಲೂಕಿನ ಕೆ.ವಿ.ಶಿವ (42), ಮದನಪಲ್ಲಿಯ ನಿವಾಸಿ, ಮೇಸ್ತ್ರಿ ಕೆಲಸ ಮಾಡುವ ಟಿ.ವಿ.ಮುರುಗೇಶ್‌ (65), ಆಂಧ್ರಪ್ರದೇಶದ ಅನಂತಪುರ ನಿವಾಸಿ ಲತೀಫ್‌ (53), ಕೋಲಾರ ತಾಲ್ಲೂಕಿನ ಭಟ್ಟರಹಳ್ಳಿಯ ನಿವಾಸಿ ವೆಂಕಟೇಶ್ ಬಂಧಿತರು.

ADVERTISEMENT

ಬಂಧಿತರಿಂದ ₹14.60 ಲಕ್ಷ ನಗದು, ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಎಂಬ ನಾಮಫಲಕ ಅಳವಡಿಸಿಕೊಂಡಿದ್ದ ಕಾರು, 13 ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ನಗರದ ಸಾಯಿಲೇಔಟ್ ನಿವಾಸಿ ಕೆ.ಶಂಕರಪ್ಪ ಅವರು ನೀಡಿದ ದೂರಿನ ಮೇಲೆ ಕಾರ್ಯಾಚರಣೆ ನಡೆಸಿ ಆರೋ‍ಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶ್‌ ಆಸ್ಪತ್ರೆಯ ಎದುರು ಫೆ.13ರಂದು ಕೆ.ಶಂಕರಪ್ಪ ಅವರು ನಿಂತಿದ್ದರು. ಅವರ ಬಳಿಗೆ ಬಂದಿದ್ದ ಆರೋಪಿಗಳು, ₹30 ಲಕ್ಷ ಹಣದ ಅಗತ್ಯವಿದೆ ಎಂದು ಹೇಳಿಕೊಂಡಿದ್ದರು. ₹30 ಲಕ್ಷ ಹಣ ನೀಡಿದರೆ, ₹90 ಲಕ್ಷ ನೀಡುವುದಾಗಿ ಆಮಿಷವೊಡ್ಡಿದ್ದರು. ಆರೋಪಿಗಳ ಆಮಿಷವನ್ನು ನಂಬಿದ್ದ ಕೆ.ಶಂಕರಪ್ಪ ಅವರು, ಮನೆಯಲ್ಲಿದ್ದ ಚಿನ್ನಾಭರಣ ಅಡಮಾನ ಇಟ್ಟು ಸಾಲ ಪಡೆದುಕೊಂಡಿದ್ದರು. ಜತೆಗೆ, ತಮ್ಮ ಬ್ಯಾಂಕ್‌ ಖಾತೆಯಲ್ಲಿದ್ದ ಹಣ ಡ್ರಾ ಮಾಡಿಕೊಂಡಿದ್ದರು. ಒಟ್ಟು ₹24 ಲಕ್ಷವನ್ನು ಹೊಂದಿಸಿಕೊಂಡು, ಆರೋಪಿಗಳು ಸೂಚಿಸಿದ್ದ ಸ್ಥಳಕ್ಕೆ ಹೋಗಿದ್ದರು. ಅಲ್ಲಿಗೆ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಎಂಬ ಬೋರ್ಡ್ ಅನ್ನು ಕಾರಿನಲ್ಲಿ ಅಳವಡಿಸಿಕೊಂಡು ಆರೋಪಿಗಳು ಸ್ಥಳಕ್ಕೆ ಬಂದಿದ್ದರು. ‘ಇಷ್ಟೊಂದು ಹಣ ಎಲ್ಲಿಂದ ಬಂತು’ ಎಂದು ಬೆದರಿಸಿ ₹24 ಲಕ್ಷ ಸುಲಿಗೆ ಮಾಡಿಕೊಂಡು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ಶಂಕರಪ್ಪ ಅವರು ನೀಡಿದ ದೂರು ಆಧರಿಸಿ, ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಲಾಯಿತು. ಅಲ್ಲದೇ ದೂರವಾಣಿ ಕರೆಗಳ ವಿವರ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು. ಎಲ್ಲರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ಆಂಧ್ರಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಷರೀ‍ಫ್‌
ವೇಣುಗೋಪಾಲ 
ಶಿವ 
ನಾರಾಯಣಸ್ವಾಮಿ
ಲತೀಫ್‌
ವೆಂಕಟೇಶ್ 
ಸಂಪಂಗಿರಾಮ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.