ADVERTISEMENT

ಬೆಂಗಳೂರು | ನಕಲಿ ದಾಖಲೆ: ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಡಿ.ಸಿ. ಆದೇಶ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 15:45 IST
Last Updated 31 ಜನವರಿ 2025, 15:45 IST
ಜಿ. ಜಗದೀಶ್
ಜಿ. ಜಗದೀಶ್   

ಬೆಂಗಳೂರು: ನಕಲಿ ದಾಖಲೆಗಳ ಮೂಲಕ ಆಸ್ಪತ್ರೆ ನಡೆಸುತ್ತಿದ್ದ ಎರಡು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯ್ದೆಯ (ಕೆಪಿಎಂಇ) ನಿಯಮಗಳ‌ನ್ನು ಉಲ್ಲಂಘಿಸಿದ ಖಾಸಗಿ ವೈದ್ಯಕೀಯ ಸಂಸ್ಥೆ, ಕ್ಲಿನಿಕ್ ಹಾಗೂ ಪುನರ್ವಸತಿ ಕೇಂದ್ರಗಳ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪರಿಶೀಲನೆ ನಂತರ ಸೂಚಿಸಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಮಂಡೂರು ಗ್ರಾಮದ ಕೆ.ಇ.ಬಿ ನಿಲ್ದಾಣದ ಬಳಿಯಿರುವ ಶ್ರೀನಿಧಿ ಟ್ರಸ್ಟ್ ಪುನರ್ವಸತಿ ಕೇಂದ್ರವು, ‘ಎಸ್‌. ಅಂಬರೀಶ್ ಅವರ ಕ್ಲಿನಿಕ್-ಪಾಲಿಕ್ಲಿನಿಕ್-ಅಲೋಪಥಿ ವೈದ್ಯಕೀಯ ವ್ಯವಸ್ಥೆ’ಯಲ್ಲಿ ಸಮಾಲೋಚನೆ ಸೇವೆಗೆ ಮಾತ್ರ 2021ರ ಏಪ್ರಿಲ್‌ 1ರಂದು ನೋಂದಣಿಯಾಗಿದೆ.

ADVERTISEMENT

ಹಿರಂಡಹಳ್ಳಿ ಗ್ರಾಮದಲ್ಲಿರುವ ರೈಸ್ ಫೌಂಡೇಶನ್ ಪುನರ್ವಸತಿ ಸಂಸ್ಥೆಯು ‘ಚಿರಂಜೀವಿ ಎ.ಆರ್. ಅವರ ಕ್ಲಿನಿಕ್/ಪಾಲಿಕ್ಲಿನಿಕ್-ಅಲೋಪಥಿ ವೈದ್ಯಕೀಯ ವ್ಯವಸ್ಥೆ’ಯಲ್ಲಿ ಸಮಾಲೋಚನೆ ಸೇವೆಗಾಗಿ ಮಾತ್ರ 2021ರ ಏಪ್ರಿಲ್‌ 7ರಂದು ಕೆಪಿಎಂಇ ವೆಬ್‌ಸೈಟ್‌ನಲ್ಲಿ ನೋಂದಣಿಯಾಗಿದೆ. ಈ ಸಂಸ್ಥೆಯವರು ನೀಡಿರುವ ದಾಖಲಾತಿ ಪ್ರತಿಯಲ್ಲಿ ‘ಬಾಲಕೃಷ್ಣ ಅವರ ಅಲೋಪಥಿ ವೈದ್ಯಕೀಯ ಆಸ್ಪತ್ರೆ’ ಎಂದಿದೆ. 

‘ಈ ಎರಡೂ ಸಂಸ್ಥೆಗಳ ದಾಖಲಾತಿಗಳನ್ನು ಗಮನಿಸಿದಾಗ, ಸಂಸ್ಥೆಯವರು ನಕಲಿ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಅನಧಿಕೃತವಾಗಿ ಸಂಸ್ಥೆಯನ್ನು ನಡೆಸುತ್ತಿರುವುದು ಕಂಡುಬಂದಿದೆ. ಈ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.