ADVERTISEMENT

ನಕಲಿ ದಾಖಲೆ: ರಘುಮೂರ್ತಿ ವರ್ಗ

ಭ್ರಷ್ಟರಿಗೆ ಸಚಿವ ಆರ್‌. ಅಶೋಕ ರಕ್ಷಣೆ: ಬಿಎಸ್‌ಪಿ ಮುಖಂಡ ಮಾರಸಂದ್ರ ಮುನಿಯಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 21:30 IST
Last Updated 15 ಅಕ್ಟೋಬರ್ 2020, 21:30 IST

ಬೆಂಗಳೂರು: ಮೆಟ್ರೊ ಯೋಜನೆಯ ಪರಿಹಾರಕ್ಕಾಗಿ ₹100 ಕೋಟಿ ಮೌಲ್ಯದ 17 ಎಕರೆ 35 ಗುಂಟೆ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಲಹಂಕ ತಹಶೀಲ್ದಾರ್‌ ರಘುಮೂರ್ತಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ರಘುಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಸೆಪ್ಟೆಂಬರ್‌ 29ರಂದು ಶಿಫಾರಸು ಮಾಡಿದ್ದರು. ಆದರೆ, ರಘುಮೂರ್ತಿ ಅವರನ್ನು ಅಮಾನತು ಮಾಡದೆ ವರ್ಗಾವಣೆ ಮಾಡಿರುವುದಕ್ಕೆ ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ರಘುಮೂರ್ತಿ ಅವರನ್ನು ವಾರದೊಳಗೆ ಸೇವೆಯಿಂದ ಅಮಾನತು ಮಾಡದಿದ್ದರೆ ನೂರಾರು ಜನರನ್ನು ಸೇರಿಸಿ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ‘ರಘುಮೂರ್ತಿ ಅವರನ್ನು ಅಮಾನತು ಮಾಡಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಕಂದಾಯ ಸಚಿವ ಆರ್‌.ಅಶೋಕ ಅವರು ಕಡತವನ್ನು ತರಿಸಿಕೊಂಡು ಒಂದು ವಾರ ತಮ್ಮಲ್ಲೇ ಇಟ್ಟುಕೊಂಡರು. ಇದೀಗ ಕಾಟಾಚಾರಕ್ಕೆ ವರ್ಗಾವಣೆ ಮಾಡಿಸಿದ್ದಾರೆ. ಭ್ರಷ್ಟ ಅಧಿಕಾರಿಯ ರಕ್ಷಣೆಗೆ ಆರ್‌.ಅಶೋಕ ನಿಂತಿದ್ದಾರೆ‘ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌ ಅವರು ಈ ದಾಖಲೆಗಳು ಬೋಗಸ್‌ ಎಂದು ಸೆಪ್ಟೆಂಬರ್‌ 24 ಆದೇಶ ಹೊರಡಿಸಿದ್ದರು. ಬಾಲ್‌ ಪೆನ್‌ನಲ್ಲಿ ದಾಖಲೆಗಳನ್ನು ತಿದ್ದಲಾಗಿದೆ ಎಂದೂ ಆದೇಶದಲ್ಲಿ ಉಲ್ಲೇಖಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ಹಕ್ಕು ಸ್ಥಾಪಿಸಿರುವ ಭಾಗ್ಯಮ್ಮ, ಕೆಂಚಣ್ಣ, ಸುಬ್ರಮಣಿ, ಶಾಂತಮ್ಮ, ಬಸಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಬೇಕು ಎಂದು ಸೂಚಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿರುವ ರಘುಮೂರ್ತಿ, ತಹಶೀಲ್ದಾರ್ ಕಚೇರಿಯ ಇತರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದ್ದರು.

ಈ ಕುರಿತು ‘ಪ್ರಜಾವಾಣಿ’ಯ ಸೆಪ್ಟೆಂಬರ್‌ 27ರ ಸಂಚಿಕೆಯಲ್ಲಿ ‘ನೂರು ಕೋಟಿ ಪರಿಹಾರಕ್ಕೆ ಬಾಲ್‌ಪೆನ್‌ ಕರಾಮತ್ತು!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನಮ್ಮ ಮೆಟ್ರೊ’ ಸಂಪರ್ಕ ಕಲ್ಪಿಸಲು ಭೂಸ್ವಾಧೀನ ಪ್ರಕ್ರಿಯೆಗಳು ಆರಂಭವಾಗಿವೆ. ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಮೂಲಕ ಮೆಟ್ರೊ ಮಾರ್ಗ ಹೋಗುತ್ತದೆ. ‘ಬೆಂಗಳೂರು ಮೆಟ್ರೊ ರೈಲು ನಿಗಮದಿಂದ ಭೂಪರಿಹಾರ ಪಡೆಯಲು ನಕಲಿ ದಾಖಲೆ ಸೃಷ್ಟಿಸಲಾಗಿದೆ‘ ಎಂದು ವಿಶೇಷ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.