ADVERTISEMENT

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ನಕಲಿ ವಕೀಲನ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 0:36 IST
Last Updated 13 ಜುಲೈ 2025, 0:36 IST
ಯೋಗಾನಂದ್
ಯೋಗಾನಂದ್   

ಬೆಂಗಳೂರು: ಮಹಿಳೆಯರಿಗೆ ₹30 ಕೋಟಿಗೂ ಹೆಚ್ಚು ವಂಚನೆ ಮಾಡಿದ್ದ ಆರೋಪಿಯ ಪರ ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ನಕಲಿ ವಕೀಲರೊಬ್ಬರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು‌ ಬಂಧಿಸಿದ್ದಾರೆ.

ರಾಜಾಜಿನಗರ 4ನೇಹಂತದ ನಿವಾಸಿ ಯೋಗಾನಂದ್ (52) ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. 

ಆರೋಪಿ ಸವಿತಾ ಪರ ವಕೀಲನೆಂದು ಹೇಳಿಕೊಂಡು ಬಸವೇಶ್ವರ ನಗರ ಠಾಣೆ ಬಳಿ ತೆರಳಿದ್ದ ಯೋಗಾನಂದ್, ‘ಯಾವ ಆಧಾರದಲ್ಲಿ ಬಂಧಿಸಿದ್ದೀರಿ?’ ಎಂದು ಪೊಲೀಸರನ್ನು ಪ್ರಶ್ನಿಸಿದ್ದರು. ನಂತರ ಠಾಣೆಯಲ್ಲಿದ್ದ ಸವಿತಾ ಅವರಿಂದ ಮನೆ ಬೀಗವನ್ನು ಪಡೆದುಕೊಂಡು ಹೋಗಲು ಯತ್ನಿಸಿದ್ದರು. ‘ಬೀಗವನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ' ಎಂದು ತಡೆದಾಗ ಅವರು ಪೊಲೀಸ್ ಸಿಬ್ಬಂದಿಗೆ ಬೆದರಿಸಿದ್ದರು.

ADVERTISEMENT

ಇದೇ ವೇಳೆ ಸ್ಥಳದಲ್ಲಿದ್ದ ಕೆ.ಪಿ.ಅಗ್ರಹಾರ ಠಾಣೆಯ ಇನ್‌ಸ್ಪೆಕ್ಟರ್‌  ಗೋವಿಂದರಾಜ್,  ಈ ಹಿಂದೆ ತಾವು ಬಸವೇಶ್ವರ ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ವೃದ್ಧೆಯ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಯೋಗಾನಂದ್‌  ಬಂಧಿಸಿದ್ದನ್ನು  ನೆನಪಿಸಿಕೊಂಡರು.  ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ವಕೀಲ ಅಲ್ಲ ಎಂಬುದು ಗೊತ್ತಾಗಿದೆ. ಈತ ಸವಿತಾಳ ಕಾಲೇಜು ಸಹಪಾಠಿಯಾಗಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಕರಣದ ಹಿನ್ನೆಲೆ: ಪ್ರಭಾವಿ ರಾಜಕಾರಣಿಗಳ ಸಂಬಂಧಿ ಸೋಗಿನಲ್ಲಿ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಮಹಿಳೆಯರಿಗೆ ₹30 ಕೋಟಿಗೂ ಹೆಚ್ಚು ವಂಚನೆ ಮಾಡಿದ್ದ ಸವಿತಾ (49) ಮತ್ತು ಆಕೆಯ ಸಹಚರನಾದ ಪುನೀತ್‌ (28) ಎಂಬಾತನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದರು.

‘ಶ್ರೀಮಂತ ಮಹಿಳೆಯರನ್ನು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಅವರನ್ನು ಕಿಟ್ಟಿ ಪಾರ್ಟಿಗೆ ಆಹ್ವಾನಿಸುತ್ತಿ
ದ್ದಳು. ಪ್ರಭಾವಿ ರಾಜಕಾರಣಿಗಳು ಸಂಬಂಧಿಕರು, ಇನ್ನೂ ಹಲವರ ಪರಿಚಯವಿದೆ ಎಂದು ನಂಬಿಸಿದ್ದಳು. ಅಲ್ಲದೇ, ತನ್ನ ಪತಿ ಹಾಗೂ ಕೆಲ ಸಂಬಂಧಿಕರು ವಿದೇಶದಲ್ಲಿ ನೆಲಸಿದ್ದು, ಅಲ್ಲಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿ ಕೊಡುವುದಾಗಿ, ಉದ್ಯಮದಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿದ್ದಳು’ ಎಂದು ಪೊಲೀಸರು ತಿಳಿಸಿದ್ದಾರೆ.

ಸವಿತಾಳ ಮಾತು ನಂಬಿ ₹95 ಲಕ್ಷ ನೀಡಿ ವಂಚನೆಗೊಳಗಾಗಿದ್ದ ಕುಸುಮಾ ಎಂಬುವವರು ಠಾಣೆಗೆ ದೂರು ನೀಡಿದ್ದರು. ಆರೋಪಿಯು 20ಕ್ಕೂ ಹೆಚ್ಚು ಮಹಿಳೆಯರಿಗೆ ಸುಮಾರು ₹30 ಕೋಟಿ ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಸವಿತಾ ಮತ್ತು ಪುನೀತ್‌ನನ್ನು ವಶಕ್ಕೆ ಪಡೆದು‌ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.