ಪರಾರಿ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಆಶೀರ್ವಾದದ ನೆಪದಲ್ಲಿ ವೃದ್ಧರೊಬ್ಬರಿಗೆ ವಿಭೂತಿ ನೀಡಿದ್ದ ನಾಲ್ವರು ನಕಲಿ ಸಾಧುಗಳು, ಚಿನ್ನದ ಉಂಗುರ ದೋಚಿ ಪರಾರಿಯಾಗಿರುವ ಘಟನೆ ಸದಾಶಿವನಗರ ಠಾಣಾ ವ್ಯಾಪ್ತಿಯ ನಗರದ ಮೇಖ್ರಿ ವೃತ್ತದ ಬಳಿ ನಡೆದಿದೆ.
ದಾಸರಹಳ್ಳಿ ನಿವಾಸಿ ಮಂಜುನಾಥ್ (64) ಅವರು ನೀಡಿದ ದೂರಿನ ಮೇರೆಗೆ ನಕಲಿ ಸಾಧುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಕೃತ್ಯ ನಡೆದ ಸ್ಥಳ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ’ ಎಂದು ಪೊಲೀಸರು ಹೇಳಿದರು.
ಕೆಲಸದ ನಿಮಿತ್ತ ಶಿವಾಜಿನಗರಕ್ಕೆ ತೆರಳಿದ್ದ ದೂರುದಾರ ಮಂಜುನಾಥ್ ಅವರು, ರಾತ್ರಿ 7.15ರ ಸುಮಾರಿಗೆ ಬಿಎಂಟಿಸಿ ಬಸ್‌ನಲ್ಲಿ ವಾಪಸ್ ಬಂದು ಮೇಖ್ರಿ ವೃತ್ತದ ಬಳಿಯಿರುವ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಅದೇ ಬಸ್‌ನಿಂದ ನಾಗಾ ಸಾಧುಗಳ ವೇಷದಲ್ಲಿದ್ದ ನಾಲ್ವರು ಇಳಿದುಕೊಂಡಿದ್ದರು. ಐವರು ಪ್ರಯಾಣಿಕರನ್ನು ಬಿಟ್ಟರೆ ಆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಬೇರೆ ಯಾರೂ ಇರಲಿಲ್ಲ. ಅದೇ ಸಂದರ್ಭ ನೋಡಿಕೊಂಡು ಮಂಜುನಾಥ್ ಅವರಿಗೆ ಮೋಸ ಮಾಡಿದ್ದರು’ ಎಂಬ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
‘ದೂರುದಾರರು ಬಸ್ ನಿಲ್ದಾಣದ ಆಸನದಲ್ಲಿ ಕುಳಿತಿದ್ದರು. ಆಗ ಬಸ್ ಬಗ್ಗೆ ಮಾಹಿತಿ ಕೇಳುವ ನೆಪದಲ್ಲಿ ನಕಲಿ ಸಾಧುಗಳು ಮಾತುಕತೆ ಆರಂಭಿಸಿದ್ದರು. ಚಿಕ್ಕಬಳ್ಳಾಪುರಕ್ಕೆ ತೆರಳಲು ಯಾವ ಬಸ್‌ನಲ್ಲಿ ಪ್ರಯಾಣಿಸಬೇಕು’ ಎಂದು ಕೇಳಿದ್ದರು. ಬಳಿಕ ಊಟ ಮಾಡಲು ಏನಾದರೂ ಸಹಾಯ ಮಾಡಿ ಎಂದಿದ್ದರು. ಆ ಮಾತು ಕೇಳಿದ ಬಳಿಕ ಮಂಜುನಾಥ್ ಅವರು ಪರ್ಸ್‌ನಲ್ಲಿದ್ದ ₹50 ನೀಡಿದ್ದರು. ಆ ನೋಟಿಗೆ ವಿಭೂತಿ ಹಚ್ಚಿದ್ದ ಆರೋಪಿಗಳು, ನೋಟನ್ನು ವಾಪಸ್ ನೀಡಿದ್ದರು. ಬಳಿಕ ಹಣೆಗೆ ವಿಭೂತಿ ಹಚ್ಚಿ ಪರ್ಸ್ ತೆಗೆಯುವಂತೆ ಸೂಚಿಸಿದ್ದರು. ಪರ್ಸ್‌ನಲ್ಲಿದ್ದ ಹಣಕ್ಕೂ ವಿಭೂತಿ ಹಾಕಿ ವಾಪಸ್ ನೀಡಿದ್ದರು. ಕಡೆಯದಾಗಿ ಕೈ ಬೆರಳಲ್ಲಿದ್ದ ಚಿನ್ನದ ಉಂಗುರ ತೆಗೆಯುವಂತೆ ಹೇಳಿದ್ದರು. ವಾಪಸ್ ಕೊಡುತ್ತಾರೆಂದು ಭಾವಿಸಿದ್ದ ಮಂಜುನಾಥ್, ಉಂಗುರವನ್ನು ಆರೋಪಿಗಳಿಗೆ ನೀಡಿದ್ದರು. ಉಂಗುರಕ್ಕೆ ವಿಭೂತಿ ಹಾಕಿ ಮಂತ್ರಿಸುವ ನೆಪದಲ್ಲಿ ಬಾಯೊಳಗೆ ಹಾಕಿಕೊಂಡು ಅಲ್ಲಿಂದ ಹೊರಟುಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಮಂಜುನಾಥ್ ಅವರಿಗೆ ಕೆಲಕ್ಷಣ ಪ್ರಜ್ಞೆತಪ್ಪಿದಂತೆ ಆಗಿತ್ತು. ಅವರು ಎಚ್ಚರಗೊಳ್ಳುವ ವೇಳೆಗೆ, ನಕಲಿ ಸಾಧುಗಳು ಸ್ಥಳದಿಂದ ಪರಾರಿ ಆಗಿದ್ದರು. 6 ಗ್ರಾಂ ಚಿನ್ನದ ಉಂಗುರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.