ADVERTISEMENT

ಮಕ್ಕಳನ್ನು ಹೊರಗೆ ದಬ್ಬಿ ಶಾಲೆಗೆ ಬೀಗ: ಜಮೀನು ದಾನ ನೀಡಿದ್ದ ಕುಟುಂಬದ ಕೃತ್ಯ

ಸರ್ಕಾರಿ ಶಾಲಾ ಆಸ್ತಿ ಸಂರಕ್ಷಣಾ ಅಭಿಯಾನಕ್ಕೆ ಇತರೆ ಇಲಾಖೆಗಳ ಅಸಹಕಾರ

ಚಂದ್ರಹಾಸ ಹಿರೇಮಳಲಿ
Published 25 ಜನವರಿ 2023, 22:15 IST
Last Updated 25 ಜನವರಿ 2023, 22:15 IST
ಬೀಗ ಜಡಿದ ಮಹದೇವಪುರ ಶಾಲೆಯ ಮುಂದೆ ಕುಳಿತಿರುವ ಮಕ್ಕಳು.
ಬೀಗ ಜಡಿದ ಮಹದೇವಪುರ ಶಾಲೆಯ ಮುಂದೆ ಕುಳಿತಿರುವ ಮಕ್ಕಳು.   

ಬೆಂಗಳೂರು: ಕೆ.ಆರ್‌. ಪುರಂ ವ್ಯಾಪ್ತಿಯ ಮಹದೇವಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳು ನಡೆಯುತ್ತಿರುವಾಗಲೇ, ಶಾಲೆಗೆ ಜಮೀನು ದಾನ ಮಾಡಿದ್ದ ಕುಟುಂಬದ ಕೆಲ ಸದಸ್ಯರು ಮಕ್ಕಳನ್ನು ಶಾಲೆಯಿಂದ ಹೊರದಬ್ಬಿ ಬೀಗ ಜಡಿದಿದ್ದಾರೆ.

ರಾಜ್ಯ ಸರ್ಕಾರ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಆಸ್ತಿ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿದ್ದರೂ, ನಗರ ಪ್ರದೇಶಗಳಲ್ಲಿ ಈ ಅಭಿಯಾನ ಯಶಸ್ಸು ಕಂಡಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಶಾಲೆಗಳ ಆಸ್ತಿ ಶಾಲೆಗಳ ಹೆಸರಿಗೆ ಖಾತೆ ಮಾಡಿಸಲಾಗಿದೆ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಅಭಿಯಾನ ಸಂಪೂರ್ಣ ವಿಫಲವಾಗಿದೆ. ಮಹದೇವಪುರದ ಶಾಲೆ ಇದಕ್ಕೆ ಒಂದು ಉದಾಹರಣೆ ಅಷ್ಟೆ.

ಅದೇ ಗ್ರಾಮದ ದಾನಿಯೊಬ್ಬರು ನೀಡಿದ ಜಾಗದಲ್ಲಿ 1965ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಗಿತ್ತು. 1980ರಿಂದ ಇಲ್ಲಿಯವರೆಗೂ ಶಾಲೆ ಇರುವ ಭೂಮಿಯ ದಾಖಲೆಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದ ಹೆಸರಿನಲ್ಲಿದೆ. ಶಾಲಾ ಆಸ್ತಿ ಸಂರಕ್ಷಣಾ ಅಭಿಯಾನ ಆರಂಭವಾದ ನಂತರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಖಾತೆ ಮಾಡಿಕೊಡುವಂತೆ ಶಾಲೆಯ ಮುಖ್ಯ ಶಿಕ್ಷಕರು ಅಲೆದಾಡಿದರೂ, ಪ್ರಯೋಜನವಾಗಿಲ್ಲ. ಬಿಬಿಎಂಪಿ ಸೇರಿದಂತೆ ಇತರೆ ಇಲಾಖೆಗಳ ಸಹಕಾರ ಅಭಿಯಾನಕ್ಕೆ ಸಿಗುತ್ತಿಲ್ಲ.

ADVERTISEMENT

ಪ್ರಸ್ತುತ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಮಾಧ್ಯಮದಲ್ಲೂ ತರಗತಿಗಳು ನಡೆಯುತ್ತಿವೆ. 475 ಮಕ್ಕಳಿದ್ದಾರೆ. ಹಳೆಯ ಕಟ್ಟಡದಲ್ಲಿನ ಏಳು ಕೊಠಡಿಗಳಲ್ಲೇ ಅಷ್ಟೂ ಮಕ್ಕಳು ಕಲಿಯುತ್ತಿದ್ದರು. ನಿರಂತರ ಪ್ರಯತ್ನದ ಫಲವಾಗಿ ಸರ್ಕಾರ ಸಮೀಪದಲ್ಲೇ ಶಾಲೆಗೆ ಮತ್ತೊಂದು ಜಾಗ ಮಂಜೂರು ಮಾಡಿದೆ. ಹೊಸ ಜಾಗದಲ್ಲಿ ಹೋಪ್‌ ಫೌಂಡೇಷನ್‌ ₹ 3 ಕೋಟಿ ವೆಚ್ಚದಲ್ಲಿ 12 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದೆ. 4ರಿಂದ 6ನೇ ತರಗತಿಯ ಮಕ್ಕಳು ಹಳೆಯ ಕಟ್ಟಡದಲ್ಲಿ, ಉಳಿದ ಮಕ್ಕಳು ಹೊಸ ಕಟ್ಟಡದಲ್ಲಿ ಕಲಿಯುತ್ತಿದ್ದಾರೆ. ಒಟ್ಟು 11 ಶಿಕ್ಷಕರು ಇದ್ದಾರೆ.

ಶಾಲೆ ಇರುವ ವ್ಯಾಪ್ತಿಯಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಈಚೆಗೆ ಅಲ್ಲಿ ಮೆಟ್ರೊ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶಾಲೆಯ ನಾಲ್ಕು ಅಡಿ ಜಾಗವನ್ನೂ ಬಿಟ್ಟುಕೊಡಲಾಗಿದೆ. ಹಿಂದೆ ಜಾಗ ನೀಡಿದ್ದ ಕುಟುಂಬದ ಕೆಲವರು, ತಾತ ತಮ್ಮ ಹೆಸರಿಗೆ ಜಾಗ ಬರೆದಿಟ್ಟಿದ್ದಾರೆ ಎಂದು ಕೋರ್ಟ್‌ ಮೊರೆ ಹೋಗಿದ್ದಾರೆ. ಸದರಿ ಜಾಗದಲ್ಲಿ ಶಾಲೆ ನಡೆಯುತ್ತಿರುವ ಕಾರಣ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನಗರ ಸಿವಿಲ್‌ ನ್ಯಾಯಾಲಯ ಆದೇಶ ನೀಡಿದೆ. ಆದರೂ, ಶಾಲೆಗೆ
ಅತಿಕ್ರಮ ಪ್ರವೇಶ ಮಾಡಿ, ಬೀಗ ಜಡಿಯಲಾಗಿದೆ.

‘1965ರಿಂದ ಶಾಲೆ ನಡೆಯುತ್ತಿದೆ. 1980ರಿಂದ ಜಾಗದ ಆರ್‌ಟಿಸಿ ಲಭ್ಯವಿದೆ. ವಿದ್ಯುತ್‌ ಶುಲ್ಕ ಪಾವತಿಯ ದಾಖಲೆಗಳಿವೆ. ಶಾಲೆಗೆ ಭೂಮಿ ನೀಡಿದ ದಾನಿಯೇ ಒಂದು ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ. ಕೋರ್ಟ್‌ ಕೂಡಾ ಶಾಲಾ ಚಟುವಟಿಕೆಗೆ ತೊಂದರೆ ಆಗದಂತೆ ಯಥಾಸ್ಥಿತಿಗೆ ಆದೇಶ ನೀಡಿದೆ. ಬೀಗ ತೆರವುಗೊಳಿಸಲು ಹಾಗೂ ರಕ್ಷಣೆ ಕೋರಿ ಮುಖ್ಯ ಶಿಕ್ಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.