ನೆಲಮಂಗಲ: ತಾಲ್ಲೂಕಿನ ಕೊಡಿಗೆಹಳ್ಳಿ, ಬಳ್ಳಗೆರೆ, ಕೆಂಚನಪುರ ಗ್ರಾಮಗಳ ಫಲವತ್ತಾದ ಕೃಷಿ ಜಮೀನುಗಳನ್ನು ಕೆಐಇಡಿಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ರೈತರು ಕೊಡಿಗೆಹಳ್ಳಿಯಲ್ಲಿ ಪ್ರತಿಭಟಿಸಿದರು.
‘ಸ್ವಾಧೀನಕ್ಕೆ ದರ ನಿಗದಿ ಮಾಡಲು ಕೆಐಎಡಿಬಿ ಕರೆದಿರುವ ಸಭೆಯನ್ನು ಬಹಿಷ್ಕರಿಸುತ್ತೇವೆ’ ಎಂದು ಪ್ರತಿಭಟನಕಾರರು ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಂಡರು.
‘ಈ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳಿವೆ, ಕೆರೆ– ಕುಂಟೆಗಳಿವೆ, ಅರಣ್ಯ ಭೂಮಿ, ಉತ್ತಮ ಕೃಷಿ ಭೂಮಿ, ಹಿರಿಯರ ಸಮಾಧಿಗಳಿವೆ. ಗ್ರಾಮ ಸಭೆಯಲ್ಲಿ ರೈತರೊಂದಿಗೆ ಚರ್ಚೆ, ಸಮಾಲೋಚನೆ ನಡೆಸದೆ ಭೂ ಸ್ವಾಧೀನ ಮಾಡಲು ಮುಂದಾಗುವ ಮೂಲಕ ಸರ್ಕಾರವು ಜನರ ಹಕ್ಕನ್ನು ಕಸಿದುಕೊಳ್ಳುತ್ತಿದೆ’ ಎಂದು ಪ್ರಗತಿಪರ ರೈತ ಬಳ್ಳಗೆರೆ ರುದ್ರೇಶ್ ಹೇಳಿದರು.
‘ಬರಡು ಭೂಮಿ ಎಂದು ಪರಿಗಣಿಸಿ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಬೇಸರ ತಂದಿದೆ. ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಉತ್ತಮವಾಗಿದೆ. ಅಂತರ್ಜಲದ ಮಟ್ಟ ಕೂಡ ಚೆನ್ನಾಗಿದೆ. ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನದ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನ ರಾಜ್ಯದ ಉಳಿದ ಪ್ರದೇಶಗಳಿಗೂ ಅನ್ವಯ ಮಾಡಬೇಕು’ ಎಂದು ಜಿ.ಬೈರೇಗೌಡ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಯಶೋದಾ ರಮೇಶ್, ಹರಿ ಶ್ರೀಕಂಠಾಚಾರ್, ಪಂಚಾಯಿತಿ ಮಾಜಿ ಸದಸ್ಯ ದೇವರಾಜ್, ಗಂಗಹನುಮಯ್ಯ, ಕುಮಾರ್, ಎನ್.ಬೈರೇಗೌಡ, ಕೃಷ್ಣಮೂರ್ತಿ, ಅಶ್ವಥ್ ನಾರಾಯಣ್, ಹನುಮಂತರಾಜು, ರಾಮಣ್ಣ, ನಾರಾಯಣ ಗೌಡ, ಟಿ.ನರಸಿಂಹರಾಜು, ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.