ADVERTISEMENT

ಬೆಂಗಳೂರು | ಆರ್‌.ಆರ್‌.ನಗರದಲ್ಲಿ ನಾಳೆಯಿಂದ ‘ರೈತ ಸಂತೆ’

ರೈತರಿಂದ–ಗ್ರಾಹಕರಿಗೆ ನೇರ ಮಾರಾಟ, ಪ್ರಾಯೋಗಿಕ ಪ್ರಯತ್ನ * ರೈತ ಸಂಘ–ಹಸಿರುಸೇನೆ ನಾಯಕತ್ವ

ಗಾಣಧಾಳು ಶ್ರೀಕಂಠ
Published 11 ಏಪ್ರಿಲ್ 2025, 0:29 IST
Last Updated 11 ಏಪ್ರಿಲ್ 2025, 0:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ, ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ. ‘ರೈತ ಸಂತೆ’ಯ ಮೂಲಕ ಈ ಪ್ರಯೋಗ ಆರಂಭವಾಗಲಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ‘ನೇರ ಮಾರಾಟದ ಮೂಲಕ ನಮ್ಮ ಹೋರಾಟ’ – ‘ನಮ್ಮ ಬೆಳೆಗೆ ನಮ್ಮದೇ ಬೆಲೆ’ ಶೀರ್ಷಿಕೆಯಡಿ ೀ ಕಾರ್ಯಕ್ರಮ ನಡೆಯುತ್ತಿದೆ. ಆರ್‌.ಆರ್‌ ನಗರದ ಐಡಿಯಲ್‌ ಹೋಮ್ಸ್‌ ಲೇಔಟ್‌ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ ಏಪ್ರಿಲ್‌ 12 ರಿಂದ 14ರವರೆಗೆ ಆಯೋಜಿಸಿರುವ ‘ರೈತ ಸಂತೆ’ಯಲ್ಲಿ ರೈತರೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.‌

ರಾಜ್ಯದ ವಿವಿಧ ಭಾಗಗಳಲ್ಲಿರುವ ರೈತರು ದವಸ - ಧಾನ್ಯ, ತರಕಾರಿ–ಹಣ್ಣು, ಜೇನು–ಹೈನು, ಅಡುಗೆ ಎಣ್ಣೆ, ಮೌಲ್ಯವರ್ಧಿತ ಉತ್ಪನ್ನಗಳೂ ಸೇರಿದಂತೆ ತಾವು ಬೆಳೆದ ಎಲ್ಲ ರೀತಿಯ ಉತ್ಪನ್ನಗಳನ್ನು ರೈತ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಇದು ಮಧ್ಯವರ್ತಿಗಳಿಲ್ಲದೆ ಬೆಳೆದವರೇ ತಮ್ಮ ಬೆಳೆಗೆ ಬೆಲೆ ನಿಗದಿಪಡಿಸಿ ಮಾರಾಟ ಮಾಡುವ ವಿಶಿಷ್ಟ ಸಂತೆ.

ಗ್ರಾಹಕರಿಗೆ ಆಹ್ವಾನ : ಸಂತೆಯಲ್ಲಿ ಪಾಲ್ಗೊಳ್ಳುವ ರೈತರು ತಾವು ಮಾರುಕಟ್ಟೆಗೆ ತರುವ ಉತ್ಪನ್ನಗಳು, ಬೆಳೆ ಬೆಳೆಯುವ ಹಿಂದಿನ ಶ್ರಮ, ಖರ್ಚು ವೆಚ್ಚದ ವಿಚಾರಗಳನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಗ್ರಾಹಕರನ್ನು ಸಂತೆಗೆ ಆಹ್ವಾನಿಸುತ್ತಿದ್ದಾರೆ.

ADVERTISEMENT

‘ನಾನು ಬೆಳೆದ ಬದನೆಕಾಯಿ ಮಾರಿದಾಗ ಕೆಜಿಗೆ ₹3, ಅದೇ ಬದನೆಕಾಯಿಯನ್ನು ಗ್ರಾಹಕ ಖರೀದಿಸುವಾಗ ₹30. ಮಧ್ಯೆ ₹27 ಎಲ್ಲಿ ಹೋಯಿತು? ಯಾರ ಕೈ ಸೇರಿತು? ಎಂದು ಯೋಚಿಸಿದಾಗ, ರೈತ– ಗ್ರಾಹಕ ಇಬ್ಬರಿಗೂ ಲಾಭವಿಲ್ಲ ಎನ್ನುವುದು ಅರಿವಾಯಿತು. ಹೀಗಾಗಿ ನಾನು ಬೆಳೆದಿರುವ ಉತ್ಪನ್ನಗಳನ್ನು ರೈತ ಸಂತೆಯಲ್ಲಿ ಮಾರಾಟ ಮಾಡಲು ಬರುತ್ತಿದ್ದೇನೆ’ ಎಂದು ತಿಪಟೂರಿನ ರೈತ ಜಯಚಂದ್ರ ಶರ್ಮಾ ಬದನೆಯಕಾಯಿ ಬೆಳೆದ ಜಮೀನಿಂದಲೇ ವಿಡಿಯೊ ಮಾಡಿ ಜಾಲತಾಣ ದಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಯೋಗಿಕ ಪ್ರಯತ್ನ: ‘ಎಲ್ಲ ಬೆಳೆಗಳ ಬೆಲೆ ನೆಲಕಚ್ಚಿದೆ. ರೈತರಿಂದ ಖರೀದಿಸುವ ಉತ್ಪನ್ನಗಳ ಬೆಲೆಗೂ, ಗ್ರಾಹಕರಿಗೆ ಮಾರಾಟವಾಗುವ ಬೆಲೆಯ ನಡುವೆ ಅಜಗಜಾಂತರವಿದೆ. ಸರ್ಕಾರಗಳಂತೂ ರೈತರ ನೋವಿಗೆ ಸ್ಪಂದಿಸುವುದಿಲ್ಲ. ಹೀಗೇ ಬಿಟ್ಟರೆ ಕಂಪನಿಗಳೇ ನಮ್ಮ ಹೊಲಕ್ಕಿಳಿಯುವ ಆಂತಕವೂ ಇದೆ. ಅದಕ್ಕಾಗಿ ಬೆಳೆದವರೇ ಬೆಳೆಗಳಿಗೆ ಬೆಲೆ ನಿಗದಿಪಡಿಸಿ ನೇರ ಮಾರಾಟ ಮಾಡಲು ಹೋರಾಟಕ್ಕಿಳಿದಿದ್ದೇವೆ. ಇದೊಂದು ಪ್ರಾಯೋಗಿಕ ಪ್ರಯತ್ನ ರೈತರನ್ನು ಬೆಂಬಲಿಸಿ’ ಎಂದು ಬಳ್ಳಾರಿ, ದೊಡ್ಡಬಳ್ಳಾಪುರ, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಹಲವು ರೈತರು ವಿಡಿಯೊಗಳಲ್ಲಿ ಮನವಿ ಮಾಡಿದ್ದಾರೆ.

‘ರೈತ ಸಂತೆ’ ಕುರಿತ ಹೆಚ್ಚಿನ ಮಾಹಿತಿಗೆ– 90354 54365 ಸಂಪರ್ಕಿಸಬಹುದು.

‘ದೇಶದ ಬೆನ್ನೆಲುಬು ಅನ್ನದಾತ - ಅನ್ನದಾತನ ಬೆನ್ನೆಲುಬು ಉತ್ಪನ್ನವನ್ನು ಕೊಂಡು ತಿನ್ನುವ ಗ್ರಾಹಕ. ಈ ಸರಳ ಸತ್ಯವನ್ನು ಜನರಿಗೆ ತಿಳಿಸಯವ ಕಾರ್ಯಕ್ರಮವಿದು. ಎಲ್ಲರೂ ರೈತರನ್ನು ಬೆಂಬಲಿಸಿ’
–ಚುಕ್ಕಿ ನಂಜುಡಸ್ವಾಮಿ ರೈತ ಸಂತೆಯ ಆಯೋಜಕರು

ರೈತರನ್ನು ಹೇಗೆ ಬೆಂಬಲಿಸಬಹುದು ?

* ನಿಮ್ಮ ನಿಮ್ಮ ಬಡಾವಣೆಗಳಲ್ಲಿ/ ಅಪಾರ್ಟ್‌ಮೆಂಟ್‌ಗಳಲ್ಲಿ ಗ್ರಾಹಕ ವೇದಿಕೆ ರಚಿಸಿಕೊಂಡು ರೈತ ಸಂಘಟಕರೊಡನೆ ಚರ್ಚಿಸಿ ಸಂತೆಗಳನ್ನು ಏರ್ಪಡಿಸಬಹುದು. ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸುವಂತೆ ಗ್ರಾಹಕರಿಗೆ ಅರಿವು ಮೂಡಿಸಬಹುದು.

* ಮಧ್ಯವರ್ತಿಗಳಿಂದ ರೈತರ ಮತ್ತು ಗ್ರಾಹಕರಿಗಾಗುತ್ತಿರುವ ಶೋಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು.

ಸಾಹಿತಿ ಕಲಾವಿದರ ಬೆಂಬಲ

‘ನೇರ ಮಾರಾಟ– ನಮ್ಮ ಹೋರಾಟ’ಕ್ಕೆ ಸಾಹಿತಿ ಎಸ್. ಜಿ.ಸಿದ್ದರಾಮಯ್ಯ ನಟ ರಂಗಾಯಣ ರಘು ಕಿರುತೆರೆ ನಟ–ನಿರ್ದೇಶಕ ಟಿ.ಎನ್. ಸೀತಾರಾಂ ಸೇರಿದಂತೆ ಹಲವು ಸಾಹಿತಿ ಲೇಖಕರು ರೈತ ಪರ ಹೋರಾಟಗಾರರು ರಂಗಭೂಮಿ ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಸಂದೇಶದ ಮೂಲಕ ‘ರೈತ ಸಂತೆ’ಯಲ್ಲಿ ಪಾಲ್ಗೊಳ್ಳಲು ಗ್ರಾಹಕರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.