ADVERTISEMENT

ರೈತರ ಹೋರಾಟ: ಬೆಂಬಲ ಸೂಚಿಸಿದ ಸಾಹಿತಿಗಳು

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 19:12 IST
Last Updated 22 ಜನವರಿ 2021, 19:12 IST

ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರೈತ ಸಂಘಟನೆಗಳು ನಗರದಲ್ಲಿ ಗಣರಾಜ್ಯೋತ್ಸವದ ದಿನ (ಜ.26) ಹಮ್ಮಿಕೊಂಡಿರುವ ಟ್ರ್ಯಾಕ್ಟರ್‌ಗಳ ಬೃಹತ್‌ ರ್‍ಯಾಲಿಗೆ ಸಾಹಿತಿಗಳು ಹಾಗೂ ಕಲಾವಿದರು ಬೆಂಬಲ ಸೂಚಿಸಿದ್ದಾರೆ.

ಕೆ. ಮರುಳಸಿದ್ದಪ್ಪ, ಡಾ.ವಿಜಯಾ, ವಸುಂಧರಾ ಭೂಪತಿ, ಎಸ್.ಜಿ. ವಾಸುದೇವ್, ಪುರುಷೋತ್ತಮ ಬಿಳಿಮಲೆ, ಅರುಂಧತಿ ನಾಗ್, ನಾಗೇಶ ಹೆಗಡೆ, ಪಿಚ್ಚಳ್ಳಿ ಶ್ರೀನಿವಾಸ್, ಜೆ. ಲೋಕೇಶ್, ಕೆ. ನೀಲಾ, ವಿಮಲಾ ಕೆ.ಎಸ್., ಕೆ. ಷರೀಫಾ, ಮಾವಳ್ಳಿ ಶಂಕರ್ ಸೇರಿದಂತೆ 50ಕ್ಕೂ ಅಧಿಕ ಮಂದಿ ಬೆಂಬಲ ಪತ್ರಕ್ಕೆ ಸಹಿ ಹಾಕಿದ್ದು, ರೈತರಿಗೆ ಮಾರಕವಾಗುವ ಕಾಯ್ದೆಯನ್ನು ಕೇಂದ್ರ ಸರ್ಕಾರವು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂರು ಮಾರಕ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ, ಅನ್ನದಾತನ ಬದುಕನ್ನು ಅತಂತ್ರಗೊಳಿಸಲು ಮುಂದಾಗಿವೆ ಎಂಬುದು ರೈತ ಸಮುದಾಯದ ಆತಂಕ. ಕಾರ್ಪೊರೇಟ್ ಕಂಪನಿಗಳು ಕೇಂದ್ರ ಸರ್ಕಾರದ ಮೂಲಕ ಹೇರಿರುವ ರೈತ ವಿರೋಧಿ ಕಾನೂನುಗಳನ್ನು ದೇಶದಾದ್ಯಂತ ರೈತ ಸಮುದಾಯ ವಿರೋಧಿಸುತ್ತಿದೆ. ವ್ಯತಿರಿಕ್ತ ಹವಾಮಾನದ ನಡುವೆಯೂ ಮಸೂದೆಗಳ ವಿರುದ್ಧ ಎರಡು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರುಪ್ರತಿಭಟಿಸುತ್ತಿದ್ದಾರೆ. ಈ ಹೋರಾಟದಲ್ಲಿ ಈಗಾಗಲೇ ನೂರಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ’ ಎಂದು ‌ಜಂಟಿ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗಣರಾಜ್ಯೋತ್ಸವದ ದಿನದಂದು ರೈತರು ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ಮಾಡುವ ಮೂಲಕ ದೇಶದ ಜನರ ಗಮನ ಸೆಳೆದು, ಅವರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಬಯಸುತ್ತಿದ್ದಾರೆ. ಈ ಐತಿಹಾಸಿಕ ರೈತ ಚಳವಳಿಗೆ ಬೆಂಬಲಿಸಲು ನಿರ್ಧರಿಸಿದ್ದೇವೆ. ದೇಶದ ಕೃಷಿ ಕ್ಷೇತ್ರದ ಹಿತದೃಷ್ಟಿಯಿಂದ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನು ಹಿಂಪಡೆಯಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮುದಾಯ, ಇಪ್ಟಾ, ಅವಿಷ್ಕಾರ, ಸಮಕಾಲೀನರು, ಬಂಡಾಯ ಸಾಹಿತ್ಯ ಸಂಘಟನೆ, ಕನ್ನಡ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಕೂಡ ಬೆಂಬಲ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.