ADVERTISEMENT

ಕೋವಿಡ್ 19 ಭೀತಿ: ಕೆಎಸ್‌ಆರ್‌ಟಿಸಿ ಐಷಾರಾಮಿ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಕುಸಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2020, 19:11 IST
Last Updated 10 ಮಾರ್ಚ್ 2020, 19:11 IST
ಬಸ್ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ
ಬಸ್ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ   

ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಐಷಾರಾಮಿ ಬಸ್‌ಗಳಲ್ಲಿನ ಪ್ರಯಾಣಿಕರ ಸಂಖ್ಯೆ ಶೇ 20ರಷ್ಟು ಕುಸಿತ ಕಂಡಿದೆ.

ವೈರಸ್ ಹರಡದಂತೆ ತಡೆಯಲು ಬಸ್‌ಗಳ ಒಳಭಾಗಗಳನ್ನು ಆಗಾಗ ಡೆಟಾಲ್‌ ಮತ್ತು ಸೋಂಕು ನಿವಾರಕ ದ್ರವಗಳ ಮೂಲಕ ಶುಚಿಗೊಳಿಸಲಾಗುತ್ತಿದೆ. ಐರಾವತ, ಫ್ಲೈಬಸ್‌ ಸೇರಿ ಐಷಾರಾಮಿ ಬಸ್‌ಗಳಲ್ಲಿ ಬ್ಯಾಕ್ಟೀರಿಯಾ ನಿರೋಧಕ ದ್ರಾವಣ ಬಳಸಿ ಧೂಮೀಕರಣ (ಫ್ಯೂಮಿಗೇಷನ್) ಮಾಡಲಾಗುತ್ತಿದೆ. ಚಾಲನಾ ಸಿಬ್ಬಂದಿಗೆ ಮುಖಗವಸು(ಮಾಸ್ಕ್) ವಿತರಿಸಲಾಗಿದೆ. ನಿಲ್ದಾಣಗಳನ್ನು ಆಗಾಗ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಆದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಪ್ರತಿನಿತ್ಯ ಸರಾಸರಿ 21 ಸಾವಿರ ಪ್ರಯಾಣಿಕರು ಐಶಾರಾಮಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದು, 18 ಸಾವಿರದಷ್ಟು ಪ್ರಯಾಣಿಕರು ಮಾತ್ರ ಮಂಗಳವಾರ ಪ್ರಯಾಣ ಮಾಡಿದ್ದಾರೆ. 3 ಸಾವಿರಕ್ಕೂ ಹೆಚ್ಚುಪ್ರಯಾಣಿಕರು ಬುಕ್ಕಿಂಗ್ ರದ್ದು ಮಾಡಿಕೊಂಡಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ವಿವರಿಸಿದರು.

ADVERTISEMENT

ಖಾಸಗಿ ಬಸ್‌ಗಳಲ್ಲಿ ಪ್ರಯಾಣಕ್ಕೆ ಆಸನ ಕಾಯ್ದಿರಿಸಿದ್ದ ಪ್ರಯಾಣಿಕರಲ್ಲೂ ಸಾಕಷ್ಟು ಮಂದಿ ಪ್ರಯಾಣ ರದ್ದು ಮಾಡಿಕೊಂಡಿದ್ದಾರೆ. ಬುಕ್ಕಿಂಗ್ ರದ್ದು ಮಾಡುತ್ತಿರುವ ಇ–ಮೇಲ್‌ಗಳ ಬರುತ್ತಲೇ ಇವೆ ಎಂದು ಖಾಸಗಿ ಟ್ರಾವೆಲ್ಸ್‌ ಏಜೆನ್ಸಿ ಮಾಲೀಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.