ಬೆಂಗಳೂರು: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಪ್ರತಿನಿಧಿಗಳೊಂದಿಗೆ ಶುಕ್ರವಾರ ನಡೆದ ಮಾತುಕತೆ ಮುರಿದುಬಿದ್ದಿದೆ.
‘ನ್ಯಾ.ಶೈಲೇಂದ್ರಕುಮಾರ್ ಸಮಿತಿ ಶೇ 8ರಷ್ಟು ಶುಲ್ಕ ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಆದರೆ, ನಾವು ಶೇ 10ರಷ್ಟು ಹೆಚ್ಚಳ ಮಾಡಲು ಒಪ್ಪಿದ್ದೇವೆ. ಆದರೆ, ಖಾಸಗಿ ಸಂಸ್ಥೆಗಳ ಆಡಳಿತದವರು ಶೇ 30ರಷ್ಟು ಶುಲ್ಕ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಅಥವಾ ಡೀಮ್ಡ್ ವಿಶ್ವವಿದ್ಯಾಲಯಗಳ ಶುಲ್ಕ ಮಾದರಿಯನ್ನು ಅಳವಡಿಸಿಕೊಳ್ಳಲು ಒಪ್ಪಿಗೆ ಕೇಳಿದ್ದಾರೆ. ಇವೆರಡೂ ಅಸಾಧ್ಯ. ಶನಿವಾರ ಕೊನೆಯ ಸುತ್ತಿನ ಮಾತುಕತೆ ನಡೆಸುವಂತೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದೇನೆ' ಎಂದು ಸಚಿವ ಶಿವಕುಮಾರ್ ತಿಳಿಸಿದರು.
‘ತಾವು ಕಮಿಷನ್ ಪಡೆಯುತ್ತಿರುವುದಾಗಿ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಆ ಬಗ್ಗೆ ದಾಖಲೆ ಇದ್ದರೆ ಕೊಡಲಿ. ಬೇಕಿದ್ದರೆ ಎಸಿಬಿಗೂ ದೂರು ಕೊಡಲಿ. ಚಿತ್ರ ಹಿಂಸೆ ಕೊಡಬೇಕು ಎನ್ನುವುದೇ ಅವರ ಉದ್ದೇಶ. ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ. ನಾವಿನ್ನೂ ಕಣ್ಣೇಬಿಟ್ಟಿಲ್ಲ. ಎಲ್ಲಿಂದ ಕಮಿಷನ್ ಪಡೆಯುವುದು?’ ಎಂದು ಪ್ರಶ್ನಿಸಿದ ಅವರು, ‘ಬಜೆಟ್ ಮುಗಿಯುವವರೆಗೆ ಯಾವುದೇ ಕಡತಕ್ಕೆ ಸಹಿ ಹಾಕದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಲೋಕೋಪಯೋಗಿ ಮತ್ತು ನನ್ನ ಇಲಾಖೆಗೆ ಸೂಚಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.