ADVERTISEMENT

ಭ್ರೂಣ ಲಿಂಗ ಪತ್ತೆ ಮಾಹಿತಿ ನೀಡಿದವರಿಗೆ ಬಹುಮಾನ ಮೊತ್ತ ಏರಿಕೆ: ಗುಂಡೂರಾವ್

ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 15:41 IST
Last Updated 23 ಜನವರಿ 2026, 15:41 IST
ಬಲೂನು ಹಾರಿ ಬಿಡುವ ಮೂಲಕ ದಿನೇಶ್ ಗುಂಡೂರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು
ಬಲೂನು ಹಾರಿ ಬಿಡುವ ಮೂಲಕ ದಿನೇಶ್ ಗುಂಡೂರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು    

ಬೆಂಗಳೂರು: ‘ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ನೀಡುವ ಬಹುಮಾನವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಭ್ರೂಣ ಹತ್ಯೆ ತಡೆಗೆ ಕಾನೂನಿನಡಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ಆರೋಗ್ಯ ಇಲಾಖೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‍ಡಿಟಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಯಶಸ್ವಿಗೊಂಡ ಗುಪ್ತ ಕಾರ್ಯಾಚರಣೆಯಲ್ಲಿ ಮಾಹಿತಿ ನೀಡಿದವರಿಗೆ ಈ ಬಹುಮಾನ ನೀಡಲಾಗುತ್ತಿದೆ. ಸಾರ್ವಜನಿಕರು ಸಹ ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಭ್ರೂಣ ಹತ್ಯೆ ತಡೆಗೆ ಸಹಕರಿಸಬೇಕು. ಇದರಿಂದ ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ವ್ಯತ್ಯಾಸ ಕಡಿಮೆಯಾಗಲಿದೆ’ ಎಂದರು. 

ADVERTISEMENT

‘ಹೆಣ್ಣು ಮಕ್ಕಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹೆಣ್ಣುಮಕ್ಕಳ ಆರೋಗ್ಯ ಕಾಪಾಡಲು ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ‘ಅನಿಮೀಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ’ಯು ಹೆಣ್ಣುಮಕ್ಕಳ ರಕ್ತ ಹೀನತೆ ಹೋಗಲಾಡಿಸುವಲ್ಲಿ ಮಹತ್ವದ ಯೋಜನೆಯಾಗಿದೆ. ‘ಶುಚಿ ಯೋಜನೆ’, ‘ಜನನಿ ಸುರಕ್ಷಾ ಯೋಜನೆ’ಗಳನ್ನು ಜಾರಿಗೊಳಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು. 

‘ಹೆಣ್ಣು–ಗಂಡು ನಡುವಿನ ವ್ಯತ್ಯಾಸ ಶತಮಾನದಿಂದ ಇದೆ. ಇದರಿಂದ ಹೆಣ್ಣು ಮಕ್ಕಳಿಗೆ ಸರಿಸಮಾನ ಅವಕಾಶ, ಗೌರವಗಳು ಸಮಾಜದಲ್ಲಿ ದೊರೆತಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಸೇರಿ ವಿವಿಧೆಡೆ ಶೇ 50 ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನಷ್ಟು ಬದಲಾವಣೆಗೆ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಸಹಕಾರಿಯಾಗಿವೆ’ ಎಂದರು. 

ಇಲಾಖೆ ಆಯುಕ್ತ ಗುರುದತ್ತ ಹೆಗಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಅವಿನಾಶ್ ಮೆನನ್ ರಾಜೇಂದ್ರನ್, ಇಲಾಖೆ ನಿರ್ದೇಶಕ ಡಾ. ವಸಂತ್ ಕುಮಾರ್ ಕೆ. ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.