
ಬೆಂಗಳೂರು: ಪಿತೃಪ್ರಧಾನ ವ್ಯವಸ್ಥೆಯನ್ನು, ಅದರ ಜ್ಞಾನ ಮೀಮಾಂಸೆಯನ್ನು ಎಲ್ಲರೂ ಪ್ರಶ್ನಿಸಬೇಕು. ಅದುವೇ ಸ್ತ್ರೀವಾದ ಎಂದು ಲೇಖಕಿ ಎಚ್.ಎಸ್. ಶ್ರೀಮತಿ ಪ್ರತಿಪಾದಿಸಿದರು.
ಆಕೃತಿ ಪುಸ್ತಕ ಮತ್ತು ಜೀರುಂಡೆ ಪುಸ್ತಕ ಪ್ರಕಾಶನಗಳು ಭಾನುವಾರ ಹಮ್ಮಿಕೊಂಡಿದ್ದ ಮೂರು ಕೃತಿಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯು ಸ್ತ್ರೀವಾದಿ ವಿಮರ್ಶೆಯ ಒಂದು ಭಾಗ ಅಷ್ಟೇ. ಸಾಹಿತ್ಯ ಒಂದೇ ಅಲ್ಲ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪಿತೃಪ್ರಧಾನ ವ್ಯವಸ್ಥೆ ಹೇಗಿದೆ? ಸ್ತ್ರೀಯರನ್ನು ಹೇಗೆ ಕಾಣಲಾಗುತ್ತಿದೆ? ಎಂಬ ನೋಟ ಎಲ್ಲರಿಗೂ ಬರಬೇಕು. ಅರ್ಥಶಾಸ್ತ್ರದ ಪ್ರಮೇಯಗಳು ಏನು ಎಂಬುದಕ್ಕಿಂತ ಆ ಪ್ರಮೇಯಗಳು ಸ್ತ್ರೀಯರ ಅರ್ಥವ್ಯವಸ್ಥೆಯನ್ನು ಒಳಗೊಂಡಿವೆಯೇ ಎಂದು ನೋಡುವಂತಾಗಬೇಕು. ಇದೇ ರೀತಿ ಎಲ್ಲ ಕ್ಷೇತ್ರಗಳನ್ನೂ ಪರೀಕ್ಷೆಗೆ ಒಡ್ಡಬೇಕು ಎಂದು ಹೇಳಿದರು.
ಲೇಖಕ ಕೆ.ವಿ. ನಾರಾಯಣ ಮಾತನಾಡಿ, ‘ಕುವೆಂಪು ಅವರನ್ನು ಅವರ ಬರಹಗಳಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವೇ ಎಂದು ಚಿಂತನೆ ನಡೆಸಬೇಕು. ಕುವೆಂಪು ಅವರು ಮನುಜಮತ ವಿಶ್ವಪಥ, ಸರ್ವೋದಯ ಮುಂತಾದ ಗುರಿಗಳನ್ನು ಹೇಳಿದ್ದಾರೆ. ಆದರೆ, ಈ ಗುರಿಯನ್ನು ಸಾಧಿಸುವ ದಾರಿ ಯಾವುದು ಎಂಬುದನ್ನು ಹೇಳಿಲ್ಲ. ತತ್ವ ಮತ್ತು ಪ್ರಯೋಗ ಒಟ್ಟೊಟ್ಟಿಗೆ ಸಾಗಬೇಕು. ಪ್ರಾಯೋಗಿಕ ಮತ್ತು ಸೈದ್ಧಾಂತಿಕವಾಗಿ ಒಂದಕ್ಕೊಂದು ಪೂರಕವಾಗಿರಬೇಕು’ ಎಂದು ಹೇಳಿದರು.
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಕೃತಿಗಳನ್ನು ಜನಾರ್ಪಣೆ ಮಾಡಿದರು. ಎಚ್.ಎಸ್.ಶ್ರೀಮತಿಯವರ ‘ಸ್ತ್ರೀವಾದಿ ಸಾಹಿತ್ಯ ವಿಮರ್ಶೆ’ ಬಗ್ಗೆ ನಾಟಕಕಾರ ಕೆ.ವೈ. ನಾರಾಯಣಸ್ವಾಮಿ ಮಾತನಾಡಿದರು. ಕೆ.ವಿ. ನಾರಾಯಣ ಅವರ ‘ಹೊಸ ಓದುಗರಿಗೆ ಕುವೆಂಪು’ ಬಗ್ಗೆ ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ, ‘ಕನ್ನಡ ನುಡಿ ರಚನೆ–ಕೆಲವು ನೆಲೆಗಳು’ ಬಗ್ಗೆ ಪ್ರಾಧ್ಯಾಪಕಿ ಶಶಿಕಲಾ ಎಚ್. ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.