ADVERTISEMENT

ಪೊಲೀಸ್ ಅಧಿಕಾರಿ ಸೋಗಿನಲ್ಲಿ ಬಜ್ಜಿ, ಬೋಂಡಾ ಸುಲಿಗೆ: ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 8:42 IST
Last Updated 10 ಜನವರಿ 2023, 8:42 IST
   

ಬೆಂಗಳೂರು: 50 ವರ್ಷದ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿ ಸೋಗಿನಲ್ಲಿ ಹತ್ತಿರದ ಅಂಗಡಿಗಳಲ್ಲಿ ಬಜ್ಜಿ, ಬೋಂಡಾ ಮತ್ತು ದಿನಸಿ ಪದಾರ್ಥಗಳನ್ನು ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.

ಇಲ್ಲಿನ ಅಯ್ಯಪ್ಪ ದೇಗುಲದ ಬಳಿ ತಳ್ಳುವ ಗಾಡಿಯಲ್ಲಿ ಬಜ್ಜಿ ಮತ್ತು ಬೋಂಡಾ ಮಾರುವ ವ್ಯಾಪಾರಿ ಸಹಾಯಕ್ ಸಲಾಮ್, ಹಫ್ತಾ ವಸೂಲಿಯಿಂದ ತೀವ್ರ ಬೇಸತ್ತಿದ್ದಾರೆ.

ಕಳೆದ ಒಂದು ತಿಂಗಳಿಂದ ವಾರಕ್ಕೆ ಒಂದೆರಡು ಬಾರಿ ಅಂಗಡಿಗೆ ಬರುತ್ತಿದ್ದ ಮಹಿಳೆ ತನ್ನನ್ನು ತಾನು ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದರು. ಅಲ್ಲದೆ, ಉಚಿತವಾಗಿ ಆಹಾರವನ್ನು ಕೊಂಡೊಯ್ಯುತ್ತಿದ್ದರು.

ADVERTISEMENT

ಪ್ರತೀ ಬಾರಿಯೂ ತನಗೆ ಉಚಿತವಾಗಿ ಆಹಾರ ಕೊಡದಿದ್ದರೆ ನಿಮ್ಮದು ಅಕ್ರಮವಾಗಿ ಹಾಕಿಕೊಂಡಿರುವ ಅಂಗಡಿ ಎಂದು ವರದಿ ನೀಡಿ, ಬಾಗಿಲು ಮುಚ್ಚಿಸುವುದಾಗಿ ಬೆದರಿಸುತ್ತಿದ್ದರು. ಭಯಗೊಂಡ ಸಲಾಮ್ ನಿತ್ಯ ಅವರಿಗೆ ಉಚಿತ ಆಹಾರ ಕೊಡುತ್ತಿದ್ದರು.

ಜನವರಿ 5ರಂದು ಮೊಟ್ಟೆ ಬೋಂಡಾ ತಿಂದು ₹100 ಬೆಲೆಯ ಬೋಂಡಾ ಪಾರ್ಸಲ್ ಮಾಡುವಂತೆ ಕೇಳಿದ ಮಹಿಳೆ ವಿರುದ್ಧ ತಿರುಗಿಬಿದ್ದ ಸಲಮ್, ಹಣ ಕೊಡಿ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ, ಕೂಡಲೇ ಅಂಗಡಿ ಎತ್ತಿಸುವುದಾಗಿ ಜೋರು ಮಾಡಿದ್ದಾರೆ.

ಈ ಸಂದರ್ಭ112ಕ್ಕೆ ಕರೆ ಮಾಡಿದ ಸಲಾಮ್, ಕಿರುಕುಳದ ಬಗ್ಗೆ ದೂರು ನೀಡಿದ್ಧಾರೆ. ಗಾಬರಿಗೊಂಡ ಮಹಿಳೆ ಸ್ಥಳದಿಂದ ಕಾಲ್ಕಿತಿದ್ದಾರೆ. ಮಹಿಳೆಯ ವಾಹನ ಸಂಖ್ಯೆಯನ್ನು ಸಲಾಮ್ ಬರೆದಿಟ್ಟುಕೊಂಡಿದ್ದಾರೆ. ಸ್ಥಳಕ್ಕೆ ಬಂದ ಹೊಯ್ಸಳ ವಾಹನದ ಸಿಬ್ಬಂದಿ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.

ವಾಹನದ ನೋಂದಣಿ ಸಂಖ್ಯೆ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಲೀಲಾವತಿ ಎಂಬ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ ಗಂಡ ಎಂಜಿನಿಯರ್ ಆಗಿದ್ದು, ಮಗಳು ವೈದ್ಯೆ ಮತ್ತು ಮಗ ಇಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಸ್ಥಳೀಯ ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡಿರುವುದಾಗಿ ಲೀಲಾವತಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ಧಾರೆ. ಲೀಲಾವತಿಗೆ ನ್ಯಾಯಾಲಯ ಜಾಮೀನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.