ADVERTISEMENT

ಉತ್ತರ ಕರ್ನಾಟಕ ಅಭಿವೃದ್ಧಿಗೆ ಪಕ್ಷಾತೀತ ಹೋರಾಟ ಅಗತ್ಯ: ಶಾಸಕ ಪ್ರಕಾಶ್ ಕೋಳಿವಾಡ

ವಿಧಾನಸಭೆಯಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 14:44 IST
Last Updated 17 ಡಿಸೆಂಬರ್ 2024, 14:44 IST
ಪ್ರಕಾಶ್ ಕೋಳಿವಾಡ 
ಪ್ರಕಾಶ್ ಕೋಳಿವಾಡ    

ಸುವರ್ಣ ವಿಧಾನಸೌಧ (ಬೆಳಗಾವಿ): ‘ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಸಂಪೂರ್ಣವಾಗಿ ದಕ್ಷಿಣ ಕರ್ನಾಟಕವನ್ನು ಕೇಂದ್ರೀಕರಿಸಿವೆ. ಉತ್ತರ ಕರ್ನಾಟಕ ಕೇಂದ್ರಿತ ಅಭಿವೃದ್ಧಿ ಯೋಜನೆಗಳಿಗಾಗಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಪ್ರಬಲ ಹೋರಾಟ ನಡೆಸುವ ಅಗತ್ಯವಿದೆ’ ಎಂದು ಕಾಂಗ್ರೆಸ್‌ನ ಪ್ರಕಾಶ್ ಕೋಳಿವಾಡ ಅವರು ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಪಾದಿಸಿದರು.

ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಎಲ್ಲ ಯೋಜನೆಗಳಿಂದಲೂ ದಕ್ಷಿಣ ಕರ್ನಾಟಕಕ್ಕೆ ಹೆಚ್ಚು ಲಾಭವಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿದೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಅಭಿವೃದ್ಧಿಯ ಪರಿಕಲ್ಪನೆಯೇ ಬದಲಾಗಬೇಕು. ದಕ್ಷಿಣ ಕರ್ನಾಟಕದ ಜನಪ್ರತಿನಿಧಿಗಳ ಮಾದರಿಯಲ್ಲಿ ನಾವೂ ಸಂಘಟಿತ ಪ್ರಯತ್ನ ನಡೆಸಬೇಕು’ ಎಂದರು.

ನಿವ್ವಳ ರಾಷ್ಟ್ರೀಯ ಉತ್ಪನ್ನಕ್ಕೆ ಕೊಡುಗೆ ನೀಡುವುದರಲ್ಲಿ ಮೊದಲ ಹತ್ತು ಜಿಲ್ಲೆಗಳು ದಕ್ಷಿಣ ಕರ್ನಾಟಕದಲ್ಲಿದ್ದರೆ, ಕಡೆಯ ಹತ್ತು ಜಿಲ್ಲೆಗಳು ಉತ್ತರ ಕರ್ನಾಟಕದಲ್ಲಿವೆ. ಸಾರ್ವಜನಿಕ ಉದ್ದಿಮೆಗಳು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲವೂ ದಕ್ಷಿಣ ಕರ್ನಾಟಕದಲ್ಲೇ ಇವೆ. ಇನ್ನು ಮುಂದಾದರೂ ಈ ಪರಿಸ್ಥಿತಿ ಬದಲಾವಣೆ ಆಗಬೇಕು ಎಂದು ಹೇಳಿದರು.

ADVERTISEMENT

ಬಿಜೆಪಿಯ ಬಿ.ವೈ. ವಿಜಯೇಂದ್ರ ಮಾತನಾಡಿ, ‘ತೊಗರಿ ಬೆಳೆ ನಾಶದಿಂದ ಸಂಕಷ್ಟದಲ್ಲಿರುವ ಮೂರು ಲಕ್ಷ ರೈತರಿಗೆ ಪರಿಹಾರ ನೀಡಬೇಕು. ಕಾಂಗ್ರೆಸ್‌ ಪಕ್ಷವು ಚುನಾವಣೆಗೂ ಮೊದಲು ಕೊಟ್ಟಿದ್ದ ಭರವಸೆಯಂತೆ ಪ್ರತಿ ವರ್ಷ ₹40,000 ಕೋಟಿಯನ್ನು ಒದಗಿಸಿ, ಕಾಲಮಿತಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಶಿಕ್ಷಕರ ಕೊರತೆ ನಿವಾರಣೆಗೆ ಆದ್ಯತೆ ನೀಡಬೇಕು. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪೂರಕವಾಗಿ ವಿಶೇಷ ಯೋಜನೆ ರೂಪಿಸಬೇಕು. ಅರಣ್ಯ ಉತ್ಪನ್ನಗಳ ಮೂಲಕ ವರಮಾನ ಗಳಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಕಾಂಗ್ರೆಸ್‌ನ ಬಿ.ಆರ್‌. ಪಾಟೀಲ ಸಲಹೆ ನೀಡಿದರು.

ಬಿಜೆಪಿಯ ಡಾ. ಅವಿನಾಶ್ ಜಾಧವ್ ಮಾತನಾಡಿ, ‘ಕಲಬುರಗಿಯ ತೊಗರಿ ಬೇಳೆಗೆ ಜಿಐ ಟ್ಯಾಗ್ ದೊರಕಿದೆ. ವಿಶೇಷ ಗುಣಮಟ್ಟ ಹೊಂದಿರುವ ಕಲಬುರಗಿ ತೊಗರಿ ಬೇಳೆಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಬೇಕು’ ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿ ಕೈಗಾರಿಕಾ ನೀತಿ ರೂಪಿಸುವಂತೆ ಬಿಜೆಪಿಯ ಮಹೇಶ್ ಟೆಂಗಿನಕಾಯಿ ಆಗ್ರಹಿಸಿದರೆ, ಕೃಷಿ ಜಮೀನಿನಲ್ಲಿ ಸವಳು–ಜವಳು ಸಮಸ್ಯೆ ಪರಿಹಾರಕ್ಕೆ ರೈತರಿಗೆ ನೆರವು ನೀಡಲು ವಿಶೇಷ ಯೋಜನೆ ರೂಪಿಸುವಂತೆ ಕಾಂಗ್ರೆಸ್‌ನ ರಾಜು ಕಾಗೆ ಸಲಹೆ ನೀಡಿದರು.

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ 20 ಕೆರೆ ತುಂಬುವ ಯೋಜನೆಯಲ್ಲಿ ಕೆಲಸ ಮಾಡದೇ ₹115 ಕೋಟಿ ಬಿಲ್ ಪಾವತಿಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿಯ ಡಾ. ಚಂದ್ರು ಲಮಾಣಿ ಒತ್ತಾಯಿಸಿದರು.

ಕಾಂಗ್ರೆಸ್‌ನ ಜಿ.ಟಿ. ಪಾಟೀಲ, ಅಶೋಕ ಮನಗೂಳಿ, ಬಸನಗೌಡ ದದ್ದಲ್, ವೇಣುಗೋಪಾಲ ನಾಯಕ, ಬಿಜೆಪಿಯ ಬಸವರಾಜ ಮತ್ತಿಮೋಡ್, ಕೃಷ್ಣಾ ನಾಯ್ಕ್, ಜೆಡಿಎಸ್‌ನ ಕರೆಮ್ಮ ಜಿ. ನಾಯಕ ಸೇರಿದಂತೆ ಹಲವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಬೇಕು ಮತ್ತು ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಆಗ್ರಹ ಕೇಳಿಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.