ADVERTISEMENT

ಗಣರಾಜ್ಯೋತ್ಸವ ಅಂತಿಮ ತಾಲೀಮು: ಮೊದಲ ಬಾರಿಗೆ ಪೌರ ಕಾರ್ಮಿಕರ ಪಥ ಸಂಚಲನದ ರಂಗು

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 4:42 IST
Last Updated 24 ಜನವರಿ 2020, 4:42 IST
ಅಂತಿಮ ತಾಲೀಮು ನಡೆಸಿದ ಬಿಬಿಎಂಪಿ ಪೌರ ಕಾರ್ಮಿಕರು
ಅಂತಿಮ ತಾಲೀಮು ನಡೆಸಿದ ಬಿಬಿಎಂಪಿ ಪೌರ ಕಾರ್ಮಿಕರು    

ಬೆಂಗಳೂರು:ಜನವರಿ 26ರಗಣರಾಜ್ಯೋತ್ಸವಕ್ಕೆ ನಗರದ ಕಬ್ಬನ್‌ ರಸ್ತೆಯ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಳೆದ ಒಂದು ವಾರದಿಂದ ತಾಲೀಮು ನಡೆಯುತ್ತಿದೆ.

ಸದ್ಯ ಮೈದಾನದಲ್ಲಿ ಒಂದೆಡೆ ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೊಂದೆಡೆ ಕೆಎಸ್‌ಆರ್‌ಪಿ, ಸ್ಕೌಟ್ಸ್‌-ಗೈಡ್ಸ್‌, ಎನ್‌ಸಿಸಿ, ಸೇವಾದಳ, ವಿವಿಧ ಶಾಲಾ ಮಕ್ಕಳನ್ನು ಸೇರಿ 1,750 ಮಂದಿಯ 44 ತುಕಡಿಗಳು ಪಥಸಂಚಲನ ತಾಲೀಮು ನಡೆಸುತ್ತಿದ್ದಾರೆ.ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲಿರುವ ಬಿಬಿಎಂಪಿ ಪೌರ ಕಾರ್ಮಿಕರೂ ಪಥ ಸಂಚಲನದಅಂತಿಮ ತಾಲೀಮು ನಡೆಸಿದರು.

ಶುಕ್ರವಾರ ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್‌ ಆಯುಕ್ತರು ಹಾಗೂ ನಗರ ಜಿಲ್ಲಾಧಿಕಾರಿಗಳನ್ನು ಸೇರಿಂದತೆ ಸೇನಾ ಪಡೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 44 ತುಕಡಿಗಳಿಂದ ಪಥಸಂಚಲನ ಹಾಗೂ ಕಿಕ್ಕೇರಿ ಕೃಷ್ಣಮೂರ್ತಿ ದೊಡ್ಡವಾಡ ತಂಡದಿಂದ ನಾಡಗೀತೆ ಮತ್ತು ರೈತಗೀತೆಯ ಅಂತಿಮ ಹಂತದ ತಾಲೀಮು ನಡೆಯಿತು.

ADVERTISEMENT

ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ‘ಭಾನುವಾರ ಬೆಳಗ್ಗೆ 8.58ಕ್ಕೆ ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದಾರೆ. ಬಳಿಕ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ವಾಯುಪಡೆಯು ಹೆಲಿಕಾಪ್ಟರ್‌ ಮೂಲಕ ಪುಪ್ಪವೃಷ್ಟಿ ಮಾಡಲಿದೆ,’ ಎಂದರು

‘ರಾಜ್ಯಪಾಲರು ಪರೇಡ್‌ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿಭಾಷಣ ಮಾಡಲಿದ್ದಾರೆ.ಬಳಿಕ 2,000 ಮಕ್ಕಳಿಂದ ಮೂರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ವಿವರಿಸಿದರು.

ಸಾರ್ವಜನಿಕರಿಗಾಗಿ 4,000 ಆಸನಗಳು, ಅತಿಗಣ್ಯರಿಗೆ 2,000 ಆಸನಗಳು, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ 2,00 ಆಸನಗಳು, ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗಾಗಿ 2,000 ಆಸನಗಳು ಸೇರಿದಂತೆ ಒಟ್ಟು 10,000 ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನಗರ ಪೊಲೀಸ್‌ ಕಮಿಷನರ್ ಭಾಸ್ಕರ್‌ರಾವ್‌ ಮಾತನಾಡಿ, ‘ಮಾಣೆಕ್‌ ಷಾ ಪರೇಡ್‌ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. 70 ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೈದಾನದ ಸಮೀಪದಲ್ಲಿರುವ ಎತ್ತರದ ಕಟ್ಟಡಗಳು, ಕಾಮಗಾರಿ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಜತೆಗೆ ನಗರದ ಎಲ್ಲಾ ಪೊಲೀಸ್‌ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯಲ್ಲಿನ ರೈಲು ನಿಲ್ದಾಣ, ಹೋಟೆಲ್‌ಗ‌ಳು ಸೇರಿದಂತೆ ಎಲ್ಲೆಡೆಯೂ ಪರಿಶೀಲನೆ ನಡೆಸಲಾಗಿದೆ,’ ಎಂದರು.

‘ಮೈದಾನದ ನಾಲ್ಕೂ ದ್ವಾರಗಳಲ್ಲೂ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಲಿದ್ದು, ಮೈದಾನದ ಒಳಗೆ ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು, ವ್ಯಕ್ತಿ ಕಂಡು ಬಂದರೆ ಹತ್ತಿರದ ಪೊಲೀಸ್‌ ಸಿಬ್ಬಂದಿಗೆ ತಿಳಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.