ADVERTISEMENT

ಚಾಕುವಿನಿಂದ ಇರಿದು ಫೈನಾನ್ಶಿಯರ್ ಕೊಲೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:11 IST
Last Updated 3 ಆಗಸ್ಟ್ 2019, 19:11 IST
ವಿನ್ಸೆಂಟ್
ವಿನ್ಸೆಂಟ್   

ಬೆಂಗಳೂರು: ಸಾಲ ಮರುಪಾವತಿ ವಿಚಾರವಾಗಿ ಆರಂಭವಾದ ಜಗಳ ಫೈನಾನ್ಶಿಯರೊಬ್ಬರ ಕೊಲೆಯಲ್ಲಿ ಅಂತ್ಯವಾಗಿದ್ದು, ಆ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೊಮ್ಮಲೂರಿನ ಕೆನರಾ ಬ್ಯಾಂಕ್ ಬಳಿ ಫೈನಾನ್ಶಿಯರ್ ವಿನ್ಸೆಂಟ್ ಎಂಬುವರನ್ನು ಸ್ಥಳೀಯ ನಿವಾಸಿ ಮಣಿ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ವಿನ್ಸೆಂಟ್ ಅವರು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಹಲವು ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಟ್ಟಿದ್ದರು. ಅದರಂತೆ, ಆರೋಪಿ ಮಣಿಗೂ ಸಾಲ ನೀಡಿದ್ದರು. ಸಾಲ ವಾಪಸ್ ಕೊಡದೇ ಸತಾಯಿಸುತ್ತಿದ್ದ ಮಣಿ, ತಪ್ಪಿಸಿಕೊಂಡು ಓಡಾಡುತ್ತಿದ್ದ’ ಎಂದರು.

ADVERTISEMENT

‘ದೊಮ್ಮಲೂರಿನ ಕೆನರಾ ಬ್ಯಾಂಕ್ ಬಳಿ ಶುಕ್ರವಾರ ರಾತ್ರಿ ಮಣಿಯನ್ನು ಕಂಡು ಮಾತನಾಡಿಸಿದ್ದ ವಿನ್ಸೆಂಟ್, ಸಾಲ ವಾಪಸ್ ಕೊಡುವಂತೆ ಒತ್ತಾಯಿಸಿದ್ದ. ಅದೇ ವೇಳೆ ಅವರಿಬ್ಬರ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಣಿ, ತನ್ನ ಬಳಿಯ ಚಾಕುವಿನಿಂದ ವಿನ್ಸೆಂಟ್ ಅವರ ಕುತ್ತಿಗೆಗೆ ಇರಿದಿದ್ದ.’

‘ತೀವ್ರ ಗಾಯಗೊಂಡ ವಿನ್ಸೆಂಟ್ ಅವರನ್ನು ಸ್ಥಳೀಯರೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಶನಿವಾರ ಬೆಳಿಗ್ಗೆ ತೀರಿಕೊಂಡರು’ ಎಂದು ಪೊಲೀಸರು ವಿವರಿಸಿದರು.

ವಿಶೇಷ ತಂಡ:‘ಕೃತ್ಯದ ಬಳಿ ಆರೋಪಿ ಮಣಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್ ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.