ADVERTISEMENT

ಬಿಎಂಟಿಎಫ್‌ ಅಧಿಕಾರಿಗಳಿಗೆ ₹ 2 ಲಕ್ಷ ದಂಡ

ನೈಸ್ ಕಂಪನಿಯ ಇಬ್ಬರು ಅಧಿಕಾರಿಗಳ ಅಕ್ರಮ ಬಂಧನ ಆರೋಪ; ಬಿಎಂಟಿಎಫ್‌ಗೆ ಹೈಕೋರ್ಟ್ ತಪರಾಕಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 19:27 IST
Last Updated 26 ಸೆಪ್ಟೆಂಬರ್ 2018, 19:27 IST
ನ್ಯಾಯಮೂರ್ತಿ ಬಿ.ಎ.ಪಾಟೀಲ
ನ್ಯಾಯಮೂರ್ತಿ ಬಿ.ಎ.ಪಾಟೀಲ   

ಬೆಂಗಳೂರು: ನೈಸ್ ಕಂಪನಿಯ ಇಬ್ಬರು ಅಧಿಕಾರಿಗಳನ್ನು ಅಕ್ರಮವಾಗಿ ಬಂಧಿಸಿದ ಆರೋಪ ಸಾಬೀತಾದ ಕಾರಣ ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್‌) ಪೊಲೀಸ್‌ ಅಧಿಕಾರಿಗಳಿಗೆ ಹೈಕೋರ್ಟ್‌ ₹ 2 ಲಕ್ಷ ದಂಡ ವಿಧಿಸಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ಬುಧವಾರ ಪ್ರಕಟಿಸಿದ ನ್ಯಾಯಮೂರ್ತಿಗಳು, ‘ದಂಡದ ಮೊತ್ತವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಪರಿಹಾರ ರೂಪವಾಗಿ ಅರ್ಜಿದಾರರಾದ ಶ್ರೀನಾಥ್ ಮಂಗಳೂರು ಮತ್ತು ಬಿ.ಪವನಕುಮಾರ್ ಅವರಿಗೆ ಎರಡು ತಿಂಗಳ ಒಳಗೆ ನೀಡಬೇಕು’ ಎಂದು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿದೆ.

ಇದೇ ವೇಳೆ ನ್ಯಾಯಪೀಠವು, ಅರ್ಜಿದಾರರ ವಿರುದ್ಧ ಬೆಂಗಳೂರಿನ ಲಘು ಅಪರಾಧಗಳ ವಿಚಾರಣೆ ನಡೆಸುವ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಟ್ರಾಫಿಕ್‌ ಕೋರ್ಟ್‌ನಲ್ಲಿ (ಎಂಎಂಟಿಸಿ) ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಗೊಳಿಸಿದೆ.

ADVERTISEMENT

ಅಧಿಕಾರಿಗಳಿಂದ ವಸೂಲು ಮಾಡಿ: ‘ಬಂಧನಕ್ಕೆ ಕಾರಣವಾದ ಬಿಎಂಟಿಎಫ್‌ನ ಎಡಿಜಿಪಿ ಆರ್.ಪಿ.ಶರ್ಮ, ಡಿಎಸ್ಪಿ ಪ್ರಮೋದ್‌ ರಾವ್ ಹಾಗೂ ಪಿಎಸ್‌ಐ ಬಿ.ಸುಮಾರಾಣಿ ಅವರಿಂದ ದಂಡದ ಮೊತ್ತವನ್ನು ವಸೂಲು ಮಾಡಿ’ ಎಂದು ನ್ಯಾಯಪೀಠ ಹೇಳಿದೆ.

‘ಈ ಹಣವನ್ನು ತಲಾ ಒಂದು ಲಕ್ಷದಂತೆ ಪರಿಹಾರ ರೂಪದಲ್ಲಿ ಇಬ್ಬರಿಗೂ ನೀಡಬೇಕು‘ ಎಂದೂ ತೀರ್ಪಿನಲ್ಲಿ ತಿಳಿಸಿದೆ.

ಏನಿದು ಪ್ರಕರಣ?: ‘ನೈಸ್‌ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನು ಅತಿಕ್ರಮಣದಿಂದ ಕೂಡಿದೆ’ ಎಂದು ಆರೋಪಿಸಿ ಬೆಂಗಳೂರಿನ ಗುಟ್ಟಹಳ್ಳಿ ನಿವಾಸಿ ಎಂ.ಕೆ.ಕೆಂಪೇಗೌಡ ಎಂಬುವರು ಬಿಎಂಟಿಎಫ್‌ಗೆ ದೂರು ನೀಡಿದ್ದರು.

ಈ ದೂರು ಆಧರಿಸಿ ಆರ್.ಪಿ.ಶರ್ಮ, ನೈಸ್ (ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌) ಕಂಪನಿಯ 10ಕ್ಕೂ ಹೆಚ್ಚು ಜನರ ವಿರುದ್ಧ 2013ರ ಏಪ್ರಿಲ್‌ 18ರಂದು ಎಫ್‌ಐಆರ್ ದಾಖಲಿಸಿದ್ದರು.

ಅಂತೆಯೇ ಕಂಪನಿ ಅಧಿಕಾರಿಗಳಾದ ಶ್ರೀನಾಥ್‌ ಮಂಗಳೂರು ಮತ್ತು ಬಿ.ಪವನಕುಮಾರ್‌ ಅವರನ್ನು ಬಂಧಿಸಿದ್ದರು. ಬಂಧಿತರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದರಿಂದಾಗಿ ಇಬ್ಬರೂ ನಾಲ್ಕು ದಿನಗಳ ಕಾಲ ಜೈಲು ವಾಸ ಅನುಭವಿಸುವಂತಾಯಿತು. ಬಿಎಂಟಿಎಫ್‌ ದೂರನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ’ವಾಸ್ತವದಲ್ಲಿ ಬಿಎಂಟಿಎಫ್‌ಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ದೂರು ದಾಖಲಿಸಿಕೊಳ್ಳುವ ಅಧಿಕಾರವಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ಬಿಎಂಟಿಎಫ್‌ ದಾಖಲಿಸಿರುವ ಖಾಸಗಿ ದೂರು ರದ್ದುಗೊಳಿಸಬೇಕು’ ಎಂದು ಕೋರಿದ್ದರು.

ಈ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಬಿಎಂಟಿಎಫ್ ಪೊಲೀಸರು ಅರ್ಜಿದಾರರನ್ನು ಅಕ್ರಮವಾಗಿ ಬಂಧಿಸಿರುವುದು ವೇದ್ಯವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ಗುರುರಾಜ ದೇಶಪಾಂಡೆ ವಕಾಲತ್ತು ವಹಿಸಿದ್ದರು.

**

‘ಬಿಎಂಟಿಎಫ್‌ ಅಧಿಕಾರ ಮಿರಿ ವರ್ತಿಸುತ್ತಿದೆ’

‘ಅರ್ಜಿದಾರರನ್ನು ಬಂಧಿಸುವ ಮೂಲಕ ಇತರಿರಿಗೂ ಬೆದರಿಕೆ ಹಾಕುವುದೇ ಬಿಎಂಟಿಎಫ್‌ ಉದ್ದೇಶವಾಗಿತ್ತು‘ ಎಂಬುದು ಸಿ.ವಿ.ನಾಗೇಶ್‌ ವಾದ.

‘ಬೆಂಗಳೂರಿನ ವಿವಿಧೆಡೆಯ ಯೋಜನೆಗಳ ಬಗ್ಗೆ ಅನವಶ್ಯಕ ತಕರಾರು ಎತ್ತುವ ಬಿಎಂಟಿಎಫ್‌ ಅಧಿಕಾರಿಗಳು ಮೀರಿ ವರ್ತಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದರು.

**

ಬಿಎಂಟಿಎಫ್‌ ಅದಿಕಾರಿಗಳು ತಮ್ಮ ಅಧಿಕಾರದ ವ್ಯಾಪ್ತಿ ಮಿತಿ ಮೀರಿ ವರ್ತಿಸಿದ್ದಾರೆ. ಬಂಧನದ ಅವಶ್ಯಕತೆ ಇರದೇ ಇದ್ದರೂ ನೈಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ
–ಬಿ.ಎ.ಪಾಟೀಲ,ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.